ಮೂರು ವರ್ಷದಲ್ಲಿ ಮೂರು ಮದುವೆ: ಇಬ್ಬರು ಪತ್ನಿಗಳ ದೂರು, ವ್ಯಕ್ತಿ ಅರೆಸ್ಟ್

ಮೂರು ವರ್ಷಗಳಲ್ಲಿ ಮೂರು ಮದುವೆ ಮಾಡಿಕೊಂಡ ವ್ಯಕ್ತಿ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಗೃಹಹಿಂಸೆಯ ಆರೋಪ ಕೇಳಿಬಂದಿದ್ದು, ಮೊದಲ ಹಾಗೂ ಎರಡನೇ ಪತ್ನಿಗಳ ದೂರು ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

  • ಮೂರು ವರ್ಷದಲ್ಲಿ ಮೂರು ಮದುವೆ ಪ್ರಕರಣ
  • ಪತ್ನಿಗಳ ದೂರು: ವರದಕ್ಷಿಣೆ ಕಿರುಕುಳ, ಗೃಹಹಿಂಸೆ ಆರೋಪ
  • ಪೊಲೀಸ್ ಕ್ರಮ: ಆರೋಪಿಯ ಬಂಧನ, ಜೈಲು ವಾಸ

Man Married 3 Times: ಮೂರು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಮದುವೆ ಮಾಡಿಕೊಂಡ ವ್ಯಕ್ತಿಯೊಬ್ಬ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾನೆ. ಮೊದಲ ಹಾಗೂ ಎರಡನೇ ಪತ್ನಿಗಳು ನೀಡಿದ ವರದಕ್ಷಿಣೆ ಕಿರುಕುಳ ಮತ್ತು ಗೃಹಹಿಂಸೆಯ ದೂರು ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆ ಪಾಟ್ನಾ ಸಮೀಪದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಯಾಗಿರುವ ಪಿಂಟು ಬರ್ನ್‌ವಾಲ್ 2022ರ ಡಿಸೆಂಬರ್ 2ರಂದು ಖುಷ್ಬು ಕುಮಾರಿಯನ್ನು ಮೊದಲ ವಿವಾಹ ಮಾಡಿಕೊಂಡಿದ್ದ. ಮದುವೆಯಾದ ಕೆಲವೇ ದಿನಗಳಲ್ಲಿ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ, ಖುಷ್ಬು ಪತಿಯ ಮನೆ ತೊರೆದು ಪೋಷಕರ ಬಳಿಗೆ ಮರಳಿದ್ದಳು.

ಅನಂತರ 2024ರ ಏಪ್ರಿಲ್ 18ರಂದು ಪಿಂಟು ಗೂಡಿಯಾ ಕುಮಾರಿಯನ್ನು ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಮದುವೆಯ ನಂತರ ಒಂದು ಮಗು ಹುಟ್ಟಿದರೂ, ಪಿಂಟು ತನ್ನನ್ನು ಮೋಷಗೊಳಿಸಿ ಬಿಟ್ಟಿದ್ದಾನೆ ಎಂದು ಗೂಡಿಯಾ ಆರೋಪಿಸಿದ್ದಾಳೆ. ಗ್ರಾಮಸ್ಥರ ಮೂಲಕ ಪಿಂಟು ಮೊದಲ ಮದುವೆಯ ವಿಷಯ ತಿಳಿದು, ಗೂಡಿಯಾ ಪೊಲೀಸರಿಗೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಪಿಂಟುವನ್ನು ಬಂಧಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಈ ವರ್ಷ ಪಿಂಟು ಮೂರನೇ ಮಹಿಳೆಯನ್ನು ಮದುವೆಯಾಗಿದ್ದು, ಆಕೆಯೊಂದಿಗೆ ವಾಸಿಸುತ್ತಿದ್ದಾನೆ. ಆದರೆ ಮೊದಲ ಮತ್ತು ಎರಡನೇ ಪತ್ನಿಗಳಿಗೆ ವಿಚ್ಛೇದನ ನೀಡದೇ ಮೂರನೇ ಮದುವೆ ಮಾಡಿಕೊಂಡಿರುವುದು ಬಹಿರಂಗವಾಗುತ್ತಿದ್ದಂತೆ, ಖುಷ್ಬು ಹಾಗೂ ಗೂಡಿಯಾ ಮತ್ತೆ ಪೊಲೀಸರನ್ನು ಸಂಪರ್ಕಿಸಿದರು. ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದು, ದೈಹಿಕ ಹಿಂಸೆಯನ್ನೂ ನಡೆಸಿದ್ದಾನೆ ಎಂದು ಇಬ್ಬರೂ ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪಗಳನ್ನು ಪಿಂಟು ತಳ್ಳಿ ಹಾಕಿದ್ದು, ಕುಟುಂಬ ಪರಿಸ್ಥಿತಿಯಿಂದಾಗಿ ಮೂರು ಮದುವೆ ಮಾಡಿಕೊಳ್ಳಬೇಕಾಯಿತು ಎಂದು ಹೇಳಿದ್ದಾನೆ. ಮೊದಲ ಪತ್ನಿ ಖುಷ್ಬು ತನಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿದ್ದು, ತನ್ನ ತಾಯಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಳೆ ಎಂದು ಪ್ರತಿದೂರು ನೀಡಿದ್ದಾನೆ. ತನ್ನ ಮೂರನೇ ಪತ್ನಿಯೊಂದಿಗೆ ಯಾವುದೇ ಸಮಸ್ಯೆ ಇಲ್ಲ, ಆಕೆ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ ಎಂದು ಆತ ಹೇಳಿಕೊಂಡಿದ್ದಾನೆ.

ಆದರೆ ಮೊದಲ ಮತ್ತು ಎರಡನೇ ಪತ್ನಿಗಳ ದೂರು ಆಧರಿಸಿ ಪೊಲೀಸರು ಮತ್ತೊಮ್ಮೆ ಕ್ರಮ ಕೈಗೊಂಡಿದ್ದಾರೆ. ಪಿಂಟುವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಜೈಲಿಗೆ ಕಳುಹಿಸಲಾಗಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories