ಕುಡಿದ ನಶೆಯಲ್ಲಿ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆ! ಮೂವರು ಆರೋಪಿಗಳ ಬಂಧನ
ಕುಡಿದ ನಶೆಯಲ್ಲಿ ಪ್ರಭಾವಿ ಮುಖಂಡರ ಮಕ್ಕಳಿಂದ ಹೊಸೂರಿನಲ್ಲಿ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆ ಆರೋಪ ಕೇಳಿಬಂದಿದೆ. ವಾಗ್ವಾದದ ಬಳಿಕ ನಡೆದ ಘಟನೆ ಆತಂಕ ಹುಟ್ಟಿಸಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಗಡಿಭಾಗದ ಹೊಸೂರು ನಗರದಲ್ಲಿ ಸಂಭವಿಸಿದ ಭೀಕರ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಕುಡಿದ ನಶೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಮೂವರು ಯುವಕರು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಆತಂಕಕ್ಕೀಡಾಗಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ.
ವಾಗ್ವಾದದಿಂದ ದುರ್ಘಟನೆಗೆ ತಿರುಗಿದ ಕ್ಷಣ
ಮೃತ ಶಿವಮೂರ್ತಿ (54) ಅವರು ಅಣ್ಣೈ ಅರವಿಂದ್ ನಗರ ನಿವಾಸಿಯಾಗಿದ್ದು, ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಹಿನ್ನೆಲೆ ಅವರು ಮತ್ತು ಕುಟುಂಬದವರು ಹೊರಬಂದು ಪ್ರಶ್ನಿಸಿದ್ದಾರಂತೆ.
ಇದೇ ವೇಳೆ ಮಾತಿನ ಚಕಮಕಿ ಉಲ್ಬಣಗೊಂಡಿದ್ದು, ಕೋಪಗೊಂಡ ಆರೋಪಿಗಳು ಕಾರನ್ನು ಏಕಾಏಕಿ ಮುಂದಕ್ಕೆ ಚಲಾಯಿಸಿ ಶಿವಮೂರ್ತಿ ಅವರ ಮೇಲೆ ಹರಿಸಿದರೆಂಬ ಮಾಹಿತಿ ಲಭ್ಯವಾಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಟುಂಬಕ್ಕೂ ಗಾಯ, ಮೂವರು ಬಂಧನ
ಈ ಘಟನೆಯಲ್ಲಿ ಶಿವಮೂರ್ತಿ ಅವರ ಪುತ್ರ, ಸೊಸೆ ಹಾಗೂ ಮೊಮ್ಮಗ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ (20), ರಿತಿಕ್ ಕುಮಾರ್ (19) ಹಾಗೂ ಹರೀಶ್ (19) ಎಂಬ ಮೂವರು ಯುವಕರನ್ನು ಹೊಸೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನೆಯ ನಂತರ ಜನರ ಕಿರುಚಾಟ ಹಾಗೂ ಗೊಂದಲದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರಭಾವಿ ಮುಖಂಡರ ಮಕ್ಕಳ ಹೆಸರು ಕೇಳಿಬರುತ್ತಿರುವ ಹಿನ್ನೆಲೆ ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಕಾನೂನು ಎಲ್ಲರಿಗೂ ಸಮಾನ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ನೀಡಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.



