ಮಗನ ಸಾವಿಗೆ ಸೊಸೆಯೇ ಕಾರಣ ಎಂಬ ಶಂಕೆ! ಕೊಡಲಿಯಿಂದ ಕೊಚ್ಚಿ ಕೊಂದ ಮಾವ
ಮಗನ ಸಾವಿಗೆ ಸೊಸೆ ಮಾಡಿದ ಮಾಟವೇ ಕಾರಣ ಎಂದು ಶಂಕಿಸಿದ್ದ ಮಾವ, ಜಗಳದ ಬಳಿಕ ಕೊಡಲಿಯಿಂದ ದಾಳಿ ಮಾಡಿ ಆಕೆಯನ್ನು ಕೊಂದಿದ್ದಾನೆ. ಬಳಿಕ ಬಾವಿಗೆ ಹಾರಿ ತಾನೂ ಸಾಯಲು ಯತ್ನಿಸಿದ್ದಾನೆ.

ಮುಂಬೈ: ಮಹಾರಾಷ್ಟ್ರದ ನಾಗಪುರದಲ್ಲಿ (Nagpur) ಮಗನ ಸಾವಿಗೆ ಸೊಸೆಯೇ ಕಾರಣ ಎಂದು ಅನುಮಾನಿಸಿದ್ದ ಮಾವನೊಬ್ಬ ಆಕೆಯ ಮೇಲೆ ಕೊಡಲಿಯಿಂದ ದಾಳಿ ಮಾಡಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಬಳಿಕ ಆತ ಬಾವಿಗೆ ಹಾರಿ ತಾನೂ ಸಾಯಲು ಯತ್ನಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
70 ವರ್ಷದ ನತ್ತುಮಲ್ ಭಗವಾನ್ ಪಾಳಿ ಅವರ ಪುತ್ರ ರವಿಶಂಕರ್ 2019ರಲ್ಲಿ ಮೃತಪಟ್ಟಿದ್ದರು. ತಮ್ಮ ಮಗನ ಸಾವಿಗೆ ಸೊಸೆ ಲಕ್ಷ್ಮಿ (Laxmi) ಕಾರಣ ಎಂದು ನತ್ತುಮಲ್ ಅನುಮಾನಿಸುತ್ತಿದ್ದ ಎನ್ನಲಾಗಿದೆ. ಆಕೆ ಮಾಟ-ಮಂತ್ರ (Black Magic) ಮಾಡಿಸಿ ಮಗನ ಸಾವಿಗೆ ಕಾರಣಳಾಗಿದ್ದಾಳೆ ಎಂಬ ಶಂಕೆಯಿಂದ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ 42 ವರ್ಷದ ಲಕ್ಷ್ಮಿ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಮಗನ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾವ-ಸೊಸೆ ನಡುವೆ ಇದ್ದ ಮನಸ್ತಾಪ ಮಾತ್ರ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 11ರ ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಇದರ ಬೆನ್ನಲ್ಲೇ ಶನಿವಾರ ಮಧ್ಯಾಹ್ನ ಮನೆಯ ಹಿಂಭಾಗದಲ್ಲಿ ಲಕ್ಷ್ಮಿ ಬಟ್ಟೆ ಒಗೆಯುತ್ತಿದ್ದ ವೇಳೆ ನತ್ತುಮಲ್ ಆಕೆಯ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಲಕ್ಷ್ಮಿ ಮೃತಪಟ್ಟಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಆಕೆಯ ಇಬ್ಬರು ಮಕ್ಕಳು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಇತ್ತ ಸೊಸೆಯ ಮೇಲೆ ದಾಳಿ ಮಾಡಿದ ಬಳಿಕ ನತ್ತುಮಲ್ ಸಮೀಪದ ಬಾವಿಗೆ ಹಾರಿ ತಾನೂ ಸಾಯಲು ಯತ್ನಿಸಿದ್ದಾನೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ (Fire and Rescue) ಕಾರ್ಯಾಚರಣೆ ನಡೆಸಿ ಆತನನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ (Post-Mortem) ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಗನ ಸಾವಿಗೆ ಸೊಸೆಯೇ ಕಾರಣ ಎಂಬ ಅನುಮಾನದಿಂದಲೇ ಆರೋಪಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ನಾಗಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹತ್ಯೆಗೆ ಬಳಸಿದ ಆಯುಧ, ಹಿಂದಿನ ಜಗಳಗಳು ಹಾಗೂ ಆರೋಪಿ ಹೊಂದಿದ್ದ ಅನುಮಾನಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.



