Watch: ತಲೆಗೆ ಕೊಡಲಿ ತೂರಿದ್ದರೂ ಆಸ್ಪತ್ರೆಗೆ ಬಂದ ವ್ಯಕ್ತಿ! ಬೆಚ್ಚಿಬೀಳಿಸುವ ವೈರಲ್ ವಿಡಿಯೋ

ಮುಂಬೈನಲ್ಲಿ ವೈಷಮ್ಯದಿಂದ ನಡೆದ ದಾಳಿಯಲ್ಲಿ ವ್ಯಕ್ತಿಯ ತಲೆಗೆ ಕೊಡಲಿ ತೂರಿದರೂ ಆತ ಸ್ವತಃ ಆಸ್ಪತ್ರೆಗೆ ಬಂದ ಘಟನೆ ಬೆಚ್ಚಿಬೀಳಿಸಿದ್ದು, ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈನಲ್ಲಿ ನಡೆದ ಭೀಕರ ದಾಳಿಯೊಂದು ಜನರನ್ನು ಬೆಚ್ಚಿಬೀಳಿಸಿದೆ. ವೈಯಕ್ತಿಕ ವೈಷಮ್ಯದ ಹಿನ್ನೆಲೆ ಕೆಲವರು ವ್ಯಕ್ತಿಯೊಬ್ಬನ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದು, ತಲೆಯೊಳಗೆ ಸಿಲುಕಿದ ಸ್ಥಿತಿಯಲ್ಲಿ ಆತ ಆಸ್ಪತ್ರೆಗೆ ತಲುಪಿದ ಘಟನೆ ವೈರಲ್ ಆಗಿದೆ.

ಈ ಘಟನೆ ಮ್ಯಾಂಖುರ್ಡ್ ಪ್ರದೇಶದ ಪಿಎಂಜಿಪಿ ಕಾಲೋನಿಯಲ್ಲಿ ಮೇ 1ರ ರಾತ್ರಿ ನಡೆದಿರುವುದಾಗಿ ತಿಳಿದುಬಂದಿದೆ. ರೋಹಿತ್ ನಾಗನಾಥ್ ಪವಾರ್ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಕೊಡಲಿ ನೇರವಾಗಿ ತಲೆಯೊಳಗೆ ನುಗ್ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರ ಗಾಯಗೊಂಡಿದ್ದರೂ ರೋಹಿತ್ ಆತಂಕದ ನಡುವೆ ತಾನೇ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾನೆ. ತಲೆಯೊಳಗೆ ಕೊಡಲಿ ಸಿಲುಕಿದ್ದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದ ಅವನನ್ನು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ವೈದ್ಯರು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು.

ನಂತರ ರೋಹಿತ್‌ರನ್ನು ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ವೈದ್ಯರ ತಂಡ ಜಟಿಲ ಶಸ್ತ್ರಚಿಕಿತ್ಸೆ ನಡೆಸಿ ತಲೆಯೊಳಗೆ ಸಿಲುಕಿದ್ದ ಕೊಡಲಿಯನ್ನು ಯಶಸ್ವಿಯಾಗಿ ಹೊರತೆಗೆದಿದೆ. ಪ್ರಸ್ತುತ ರೋಹಿತ್ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಡೋಂಗ್ರಿ ರಿಮಾಂಡ್ ಹೋಂಗೆ ಕಳುಹಿಸಲಾಗಿದೆ. ದಾಳಿಯಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇದೇ ವೇಳೆ, ತಲೆಗೆ ಕೊಡಲಿ ತೂರಿದ್ದ ಸ್ಥಿತಿಯಲ್ಲಿ ಆಸ್ಪತ್ರೆ ಕಡೆಗೆ ನಡೆಯುತ್ತಿರುವ ರೋಹಿತ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories