ಸತ್ತವನು ಬದುಕಿ ಬಂದ, ಅಂತ್ಯಕ್ರಿಯೆ ಬಳಿಕ ಪತಿ ಪ್ರತ್ಯಕ್ಷ! ಹಾಗಾದ್ರೆ ಸುಟ್ಟ ಶವ ಯಾರದ್ದು?
ಒಡಿಶಾದ ಧೆಂಕನಾಲ್‌ನಲ್ಲಿ ಕಾಣೆಯಾಗಿದ್ದ ಯುವಕನನ್ನು ಮೃತಪಟ್ಟಿದ್ದಾನೆಂದು ಭಾವಿಸಿ ಕುಟುಂಬ ಅಂತ್ಯಕ್ರಿಯೆ ನಡೆಸಿತ್ತು; ಆದರೆ ತಿಂಗಳ ಬಳಿಕ ಆತ ಜೀವಂತವಾಗಿ ಮರಳಿದ್ದು, ದಹನವಾದ ಶವದ ಗುರುತು ಈಗ ನಿಗೂಢವಾಗಿದೆ.

ಭುವನೇಶ್ವರ: ಸತ್ತನೆಂದು ಭಾವಿಸಿ ಅಂತ್ಯಕ್ರಿಯೆ (Funeral) ನೆರವೇರಿಸಿದ್ದ ವ್ಯಕ್ತಿಯೇ ಏಕಾಏಕಿ ಮನೆಗೆ ಮರಳಿದರೆ ಕುಟುಂಬದ ಪರಿಸ್ಥಿತಿ ಹೇಗಿರಬಹುದು? ಒಡಿಶಾದ ಧೆಂಕನಾಲ್ ಜಿಲ್ಲೆಯಲ್ಲಿ ನಡೆದಿರುವ ಘಟನೆ ಇದೇ ರೀತಿಯ ಕುತೂಹಲಕಾರಿ ತಿರುವು ಪಡೆದುಕೊಂಡಿದೆ.
ಧೆಂಕನಾಲ್ ನಿವಾಸಿ 29 ವರ್ಷದ ಸನಾತನ್ ನಾಯಕ್ ಜುಲೈ 27ರಂದು ಸೈಕಲ್‌ನಲ್ಲಿ ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಸಂಬಂಧಿಕರ ಮನೆ ಸೇರಿದಂತೆ ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಕೊಳೆತ ಶವ ಕಂಡು ಕುಟುಂಬಕ್ಕೆ ಶಾಕ್
ಸನಾತನ್ ನಾಪತ್ತೆಯಾದ ಸುಮಾರು ಹತ್ತು ದಿನಗಳ ಬಳಿಕ ಸ್ಥಳೀಯ ಭತ್ತದ ಗದ್ದೆಯ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಶವ (Unidentified Body) ಪೊಲೀಸರಿಗೆ ಪತ್ತೆಯಾಗಿತ್ತು. ಮೃತದೇಹದ ಸ್ಥಿತಿ ಹದಗೆಟ್ಟಿದ್ದರಿಂದ ಮುಖ ಸೇರಿದಂತೆ ದೇಹದ ಗುರುತುಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಮೃತದೇಹದ ಮೇಲೆ ದೊರೆತಿದ್ದ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ನೋಡಿದ ಕುಟುಂಬಸ್ಥರು ಅದು ಸನಾತನ್ ಅವರದ್ದೇ ಎಂದು ನಂಬಿದ್ದರು. ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಲಾಗಿದ್ದು, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪತ್ನಿ ವಿಧವೆಯಂತೆ ಶೋಕಾಚರಣೆ
ಮೃತದೇಹವನ್ನು ದಹನ ಮಾಡಿದ ಬಳಿಕ ಕುಟುಂಬಸ್ಥರು ಸಂಪ್ರದಾಯದಂತೆ 11 ದಿನಗಳ ಉತ್ತರಕ್ರಿಯೆ ಮತ್ತು ಶುದ್ಧಿಕಾರ್ಯಗಳನ್ನು ಪೂರ್ಣಗೊಳಿಸಿದ್ದರು. ಪತಿ ಮೃತಪಟ್ಟಿದ್ದಾರೆಂದು ನಂಬಿದ್ದ ಸನಾತನ್ ಅವರ ಪತ್ನಿ ಬಿಳಿ ಸೀರೆ ಧರಿಸಿ ಶೋಕಾಚರಣೆಯಲ್ಲಿದ್ದರು.
ಆದರೆ ವಿಧಿವಿಧಾನಗಳು ಮುಗಿದು ಸುಮಾರು ಒಂದು ತಿಂಗಳು ಕಳೆದ ಬಳಿಕ ಇಡೀ ಕುಟುಂಬವನ್ನೇ ಬೆಚ್ಚಿಬೀಳಿಸುವ ಸುದ್ದಿ ಪೊಲೀಸರಿಂದ ಬಂದಿದೆ. ಸನಾತನ್ ನಾಯಕ್ ಸಮೀಪದ ಪಟ್ಟಣವೊಂದರಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಕುಟುಂಬಕ್ಕೆ ನೀಡಲಾಗಿದೆ.
ಮನೆಗೆ ಬಂದ ಕ್ಷಣ ಕಣ್ಣೀರಿನ ಬದಲು ಆನಂದ
ಸನಾತನ್ ಜೀವಂತವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ತಕ್ಷಣ ಆತನ ಬಳಿಗೆ ತೆರಳಿ ಮನೆಗೆ ಕರೆತಂದಿದ್ದಾರೆ. ಸತ್ತನೆಂದು ನಂಬಿದ್ದ ಪತಿ ಕಣ್ಣೆದುರೇ ನಿಂತಿದ್ದನ್ನು ಕಂಡು ಪತ್ನಿ ಹಾಗೂ ತಾಯಿ ಮಂಜು ನಾಯಕ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆದರೆ ಈ ಸಂತೋಷದ ನಡುವೆಯೇ ಮತ್ತೊಂದು ದೊಡ್ಡ ಪ್ರಶ್ನೆ ಕುಟುಂಬ ಹಾಗೂ ಪೊಲೀಸರ ಮುಂದಿದೆ. ಅಂದು ದಹನ ಮಾಡಲಾದ ಮೃತದೇಹ ಯಾರದ್ದು? ಎಂಬುದು ಈಗ ಪ್ರಕರಣದ ಕೇಂದ್ರಬಿಂದುವಾಗಿದೆ.
ಆ ಅಪರಿಚಿತ ಶವ ಯಾರದ್ದು?
ಸನಾತನ್ ಜೀವಂತವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಅಂದು ಪತ್ತೆಯಾಗಿದ್ದ ಮೃತದೇಹದ ಗುರುತಿನ ಬಗ್ಗೆ ಮರುತನಿಖೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಆ ವ್ಯಕ್ತಿ ಯಾರು, ಹೇಗೆ ಮೃತಪಟ್ಟರು ಮತ್ತು ಮೃತದೇಹ ಭತ್ತದ ಗದ್ದೆಗೆ ಹೇಗೆ ಬಂತು ಎಂಬ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದೆ.
ಅದು ಅಪಘಾತದ ಪರಿಣಾಮ ಸಂಭವಿಸಿದ ಸಾವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದೂ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಇದೇ ವೇಳೆ ಸನಾತನ್ ಇಷ್ಟು ದಿನ ಎಲ್ಲಿದ್ದರು, ಕುಟುಂಬದ ಸಂಪರ್ಕಕ್ಕೆ ಯಾಕೆ ಬಂದಿರಲಿಲ್ಲ ಎಂಬ ವಿಚಾರವೂ ಇನ್ನೂ ಸ್ಪಷ್ಟವಾಗಿಲ್ಲ.
DNA ಪರೀಕ್ಷೆ ನಡೆಸದಿರುವ ಬಗ್ಗೆ ಪ್ರಶ್ನೆ
ತೀವ್ರವಾಗಿ ಕೊಳೆತ ಅಥವಾ ಗುರುತು ಪತ್ತೆಯಾಗದ ಮೃತದೇಹವನ್ನು ಕೇವಲ ಬಟ್ಟೆಗಳ ಆಧಾರದ ಮೇಲೆ ಗುರುತಿಸಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂತಹ ಪ್ರಕರಣಗಳಲ್ಲಿ DNA ಪರೀಕ್ಷೆ (DNA Test) ಮೂಲಕ ಮೃತರ ಗುರುತು ದೃಢಪಡಿಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ಕ್ರಮದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಪೊಲೀಸರು ಇದೀಗ ಕಾಣೆಯಾದವರ ಪಟ್ಟಿಯನ್ನು (Missing Persons) ಮರುಪರಿಶೀಲಿಸುವುದರ ಜೊತೆಗೆ, ದಹನಗೊಂಡ ಶವದ ನಿಜವಾದ ಗುರುತು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.



