ಅಕ್ಕನ ಎದುರೇ ಬಾವನನ್ನು ಕೊಂದ ಬಾಮೈದ; ಕತ್ತಿಯಿಂದ ದಾಳಿ ನಡೆಸಿ ಹತ್ಯೆ

ತಂದೆ ಬಾವನಿಗೆ ಹಣ ನೀಡುತ್ತಿದ್ದಾರೆ ಎಂಬ ಅನುಮಾನದಿಂದ ಆರಂಭವಾದ ಕುಟುಂಬ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ರಾಜಸ್ಥಾನದ ಕೋಟಾದಲ್ಲಿ ಆಸ್ಪತ್ರೆಯ ಐಸಿಯು ಎದುರೇ ಬಾಮ್ಮೈದ ಕತ್ತಿಯಿಂದ ದಾಳಿ ನಡೆಸಿ ಬಾವನನ್ನು ಹತ್ಯೆ ಮಾಡಿದ್ದಾನೆ.

ರಾಜಸ್ಥಾನದ ಕೋಟಾದ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ನಡೆದ ಕೊಲೆ ಘಟನೆ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಅತ್ತೆಯನ್ನು ನೋಡಲು ಬಂದಿದ್ದ 39 ವರ್ಷದ ಮೌಲಿಕ್ ಜೈನ್ (Maulik Jain) ತನ್ನ ಬಾಮೈದ ಕಪಿಲ್ ಜೈನ್ (Kapil Jain) ನಡೆಸಿದ ದಾಳಿಗೆ ಬಲಿಯಾಗಿದ್ದಾನೆ.

ತಾಯಿಗೆ ಚಿಕಿತ್ಸೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೌಲಿಕ್ ಪತ್ನಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದ. ಎರಡನೇ ಮಹಡಿಯ ಮೆಡಿಸಿನ್ ಐಸಿಯು (Medical ICU) ವಿಭಾಗದ ಹೊರಗೆ ಇಬ್ಬರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಹಳೆಯ ಹಣಕಾಸಿನ ವಿಚಾರ ಮತ್ತೆ ಪ್ರಸ್ತಾಪವಾಗಿದ್ದು, ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಪಿಲ್ ತನ್ನ ಬಳಿ ಇದ್ದ ಚಾಕುವಿನಿಂದ ಮೌಲಿಕ್ ಎದೆಗೆ ಇರಿದಿದ್ದಾನೆ. ತೀವ್ರ ಗಾಯಗೊಂಡ ಮೌಲಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪತಿಯ ಮೇಲಿನ ದಾಳಿಯನ್ನು ತಡೆಯಲು ಪತ್ನಿ ಮಧ್ಯಪ್ರವೇಶಿಸಿದಾಗ ಆಕೆಯ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಕಪಿಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಈ ಇಬ್ಬರ ನಡುವಿನ ವೈಮನಸ್ಸು ಹೊಸದೇನಲ್ಲ. ತನ್ನ ತಂದೆ ಮೌಲಿಕ್‌ಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಅನುಮಾನ ಕಪಿಲ್‌ನಲ್ಲಿತ್ತು. ಇದೇ ವಿಚಾರವಾಗಿ ಹಲವು ಬಾರಿ ಜಗಳ ನಡೆದಿತ್ತು. ಕಳೆದ ಆಗಸ್ಟ್‌ನಲ್ಲಿ ಮೌಲಿಕ್‌ಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದ ಕಪಿಲ್, ಅವರ ಮನೆಗೂ ತೆರಳಿ ಗಲಾಟೆ ಮಾಡಿದ್ದ. ಆಗ ಪೊಲೀಸರು ಆತನನ್ನು ಬಂಧಿಸಿದ್ದರು. ಕುಟುಂಬದವರು ಮಧ್ಯಸ್ಥಿಕೆ ವಹಿಸಿ ಸುಮಾರು ಒಂದು ತಿಂಗಳ ಹಿಂದೆ ಇಬ್ಬರ ನಡುವೆ ರಾಜಿ ಮಾಡಿಸಿದ್ದರೂ ದ್ವೇಷ ಮಾತ್ರ ಕಡಿಮೆಯಾಗಿರಲಿಲ್ಲ.

ಮೌಲಿಕ್‌ಗೆ ನಾಲ್ಕು ವರ್ಷ ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ತಂದೆಯನ್ನು ಕಳೆದುಕೊಂಡಿರುವ ಪುಟ್ಟ ಮಕ್ಕಳ ಕುಟುಂಬದಲ್ಲಿ ಈಗ ದುಃಖ ಮನೆಮಾಡಿದೆ.

ಇನ್ನೊಂದೆಡೆ, ಆಸ್ಪತ್ರೆಯ ಐಸಿಯು ವಿಭಾಗದ ಹೊರಗೇ ಇಂತಹ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಸ್ಪತ್ರೆಯೊಳಗೆ ಕತ್ತಿ ಹಿಡಿದು ಆರೋಪಿ ಹೇಗೆ ಬಂದ? ಭದ್ರತಾ ಸಿಬ್ಬಂದಿ ಇದನ್ನು ಗಮನಿಸಲಿಲ್ಲವೇ? ಘಟನೆ ನಡೆದ ಸ್ಥಳದ ಸಿಸಿಟಿವಿ (CCTV) ಕ್ಯಾಮೆರಾಗಳು ಕಾರ್ಯನಿರ್ವಹಿಸದಿರುವುದಕ್ಕೆ ಕಾರಣವೇನು? ಎಂಬ ವಿಚಾರಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories