ಟೆಕ್ಸ್‌ಟೈಲ್ ಕಾರ್ಖಾನೆಯಲ್ಲಿ ಭಾರೀ ಬೆಂಕಿ, ಮಾಲೀಕ ಸೇರಿ ಎಂಟು ಜನರು ಸಜೀವ ದಹನ
ಮಹಾರಾಷ್ಟ್ರದ ಶೋಲಾಪುರ ಎಂಡಿಐಸಿಯಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಎಂಟು ಮಂದಿ ದುರ್ಮರಣ ಹೊಂದಿದ್ದು, ಮೂರು ಮಹಿಳೆಯರು ಹಾಗೂ ಒಂದು ಶಿಶು ಸಹ ಸಾವಿಗೀಡಾಗಿದ್ದಾರೆ.

- ಶೋಲಾಪುರ ಎಂಡಿಐಸಿಯಲ್ಲಿ ಭಾರೀ ಬೆಂಕಿ ಅನಾಹುತ
- ಒಂದೇ ಕುಟುಂಬದ ನಾಲ್ಕು ಮಂದಿ ಸೇರಿ ಎಂಟು ಮಂದಿ ಸಾವು
- ಶಾರ್ಟ್ ಸರ್ಕ್ಯೂಟ್ (short circuit) ಕಾರಣ ಎಂದು ಪ್ರಾಥಮಿಕ ಮಾಹಿತಿ
ಮುಂಬೈ: ಮಹಾರಾಷ್ಟ್ರದ ಕೈಗಾರಿಕಾ ಕೇಂದ್ರವಾದ ಸೋಲಾಪುರದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ಸೋಲಾಪುರದ ಎಂಡಿಐಸಿಯಲ್ಲಿರುವ ಸೆಂಟ್ರಲ್ ಟೆಕ್ಸ್‌ಟೈಲ್ ಮಿಲ್‌ನಲ್ಲಿ (Central Textile Mill) ಬೆಳಗಿನ ಜಾವ 3.45ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು.
ಕ್ರಮೇಣ, ಬೆಂಕಿ ಕಾರ್ಖಾನೆಯಾದ್ಯಂತ ಹರಡಿ, ಭಾರಿ ಬೆಂಕಿಗೆ ಕಾರಣವಾಯಿತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಆರು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ.
ಬೆಂಕಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಅವರಲ್ಲಿ ಮೂವರು ಮಹಿಳೆಯರು ಮತ್ತು ಒಂದು ಮಗು ಇರುವುದು ಬೆಳಕಿಗೆ ಬಂದಿದೆ.
ಮೃತರಲ್ಲಿ ಕಾರ್ಖಾನೆ ಮಾಲೀಕರು, ಅವರ ಒಂದೂವರೆ ವರ್ಷದ ಮೊಮ್ಮಗ ಮತ್ತು ಮೂವರು ಕುಟುಂಬ ಸದಸ್ಯರು ಸೇರಿದ್ದಾರೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಜ್ವಾಲೆಯಿಂದಾಗಿ ಬೆಂಕಿಯನ್ನು ನಿಯಂತ್ರಿಸಲು 5 ರಿಂದ 6 ಗಂಟೆಗಳು ಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದ ದೃಶ್ಯಗಳು ನೋಡಲು ಅತ್ಯಂತ ಭೀತಿದಾಯಕವಾಗಿದ್ದು, ಫ್ಯಾಕ್ಟರಿಯ ಕೆಲ ಭಾಗಗಳು ಸಂಪೂರ್ಣವಾಗಿ ಸುಟ್ಟಹೋಗಿವೆ.
Massive Fire in Solapur Textile Factory



