ಮಾಡೆಲ್ ಯುವತಿ ಹತ್ಯೆ ಪ್ರಕರಣ: ಎನ್‌ಕೌಂಟರ್ ನಂತರ ಜಿಮ್ ಟ್ರೈನರ್ ಬಂಧನ
ದೆಹಲಿಯಲ್ಲಿ 21 ವರ್ಷದ ಮಾಡೆಲ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ ಆರೋಪದ ಜಿಮ್ ಟ್ರೈನರ್‌ನ್ನು ಪೊಲೀಸರು ಎನ್‌ಕೌಂಟರ್ ಬಳಿಕ ಬಂಧಿಸಿ, ಗುಂಡೇಟಿನ ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 21 ವರ್ಷದ ಮಾಡೆಲ್ ಒಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಜಿಮ್ ಟ್ರೈನರ್‌ನನ್ನು (Gym Trainer Arrested) ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧನದ ವೇಳೆ ಆರೋಪಿ ಪ್ರತಿದಾಳಿ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಎನ್‌ಕೌಂಟರ್ ನಡೆದಿದ್ದು, ಆತನ ಎರಡೂ ಕಾಲುಗಳಿಗೆ ಗುಂಡೇಟು ತಗುಲಿದೆ. ಬಳಿಕ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಿಲಕ್ ನಗರದಲ್ಲಿರುವ ಮನೆಯಲ್ಲಿ ಬುಧವಾರ ಸಂಜೆ ಯುವತಿ ಒಬ್ಬರೇ ಇದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿದ್ದ ಕೆಲಸದಾಕೆ ಆಕೆಯ ಸ್ಥಿತಿಯನ್ನು ಗಮನಿಸಿ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ತನಿಖೆ ಆರಂಭಿಸಿದ ಪೊಲೀಸರು ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು (CCTV Footage) ಪರಿಶೀಲಿಸಿದಾಗ, ಯುವತಿಗೆ ಪರಿಚಯವಿದ್ದ ಜಿಮ್ ಟ್ರೈನರ್ ಇಮ್ರಾನ್ ಸಂಜೆ ಸುಮಾರು 5.40ರ ವೇಳೆಗೆ ಮನೆಗೆ ಬಂದಿರುವುದು ಪತ್ತೆಯಾಗಿದೆ. ಆತ ಯುವತಿ ಮೇಲೆ ದಾಳಿ ನಡೆಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿಯನ್ನು ರಾಜೌರಿ ಗಾರ್ಡನ್ ಪ್ರದೇಶದಲ್ಲಿ ಪತ್ತೆಹಚ್ಚಿದ ಪೊಲೀಸರು ಬಂಧಿಸಲು ಮುಂದಾದಾಗ, ಇಮ್ರಾನ್ ಪೊಲೀಸರತ್ತ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಪೊಲೀಸರು ನಡೆಸಿದ ಪ್ರತಿಕ್ರಿಯಾ ಕಾರ್ಯಾಚರಣೆಯಲ್ಲಿ ಆತನ ಕಾಲುಗಳಿಗೆ ಗುಂಡೇಟು (Police Encounter) ತಗುಲಿದೆ. ಗಾಯಗೊಂಡ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಯುವತಿ ಮತ್ತು ಇಮ್ರಾನ್ ನಡುವೆ ಸುಮಾರು ಒಂದೂವರೆ ವರ್ಷದಿಂದ ಪರಿಚಯವಿತ್ತು. ಆಗಸ್ಟ್ 20ರಂದು ಇಬ್ಬರೂ ಹೋಟೆಲ್‌ನಲ್ಲಿ ಭೇಟಿಯಾಗಿದ್ದರೆಂಬ ಮಾಹಿತಿ ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳಿಂದ ಯುವತಿಯೊಂದಿಗೆ ಆರೋಪಿ ಅಸಮಾಧಾನಗೊಂಡಿದ್ದ ಎನ್ನಲಾಗಿದ್ದು, ಆಕೆಯ ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದ ವಿಚಾರ ಇದಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ ಮನೆಯಲ್ಲಿ ಯುವತಿ ಒಬ್ಬರೇ ಇದ್ದ ಸಮಯದಲ್ಲಿ ಇಮ್ರಾನ್ ಅಲ್ಲಿಗೆ ತೆರಳಿದ್ದಾನೆ ಎನ್ನಲಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಆರೋಪಿ ಚಾಕುವಿನಿಂದ ಯುವತಿ ಮೇಲೆ ಹಲವು ಬಾರಿ ದಾಳಿ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ವಿವಿಧ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಹತ್ಯೆಯ ಹಿಂದಿನ ನಿಖರ ಕಾರಣ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ (Murder Investigation) ಮುಂದುವರಿಸಿದ್ದಾರೆ.



