Weather Update: ಇನ್ನೂ ಕೆಲ ದಿನ ಮಳೆ ಇಲ್ಲ! ಹವಾಮಾನ ಇಲಾಖೆ ಹೊಸ ಅಪ್‌ಡೇಟ್
Weather Update: ಕೇರಳಕ್ಕೆ ಮುಂಗಾರು ಮಾರುತಗಳ ಆಗಮನ ಇನ್ನೂ ಕೆಲವು ದಿನ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರೈತರು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದು, ಜೂನ್ ಮೊದಲ ವಾರದಲ್ಲಿ ಪ್ರವೇಶ ಸಾಧ್ಯತೆ ಇದೆ.

Weather Update: ಇಡೀ ದೇಶದ ರೈತರು ಎದುರು ನೋಡುತ್ತಿರುವ ಮುಂಗಾರು ಮಳೆ ಈ ಬಾರಿ ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಭಾರತ ಪ್ರವೇಶಿಸಲಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜೂನ್ 1ರಂದು ಕೇರಳ ತಲುಪಬೇಕಿದ್ದ ಮುಂಗಾರು ಮಾರುತಗಳು ಜೂನ್ 4 ಅಥವಾ 5ರಂದು ಪ್ರವೇಶಿಸುವ ಸಾಧ್ಯತೆ ಇದೆ.
ಮುಂಗಾರು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳ ಆರಂಭದ ಬಗ್ಗೆ ರೈತರಲ್ಲಿ ಆತಂಕವೂ ಮೂಡಿದೆ. ಹಲವೆಡೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರು ಈಗ ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ನೋಡುವಂತಾಗಿದೆ.
ಹವಾಮಾನ ಇಲಾಖೆ ಈ ಹಿಂದೆ ಮೇ 26ರ ವೇಳೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು. ನಂತರ ಪ್ರಕಟಣೆ ಬದಲಿಸಿ ಜೂನ್ 1ರಂದು ಕೇರಳ ಪ್ರವೇಶಿಸಲಿದೆ ಎಂದು ತಿಳಿಸಿತ್ತು. ಇದೀಗ ಮತ್ತೊಮ್ಮೆ ಮುಂಗಾರು ಆಗಮನ ಕೆಲವು ದಿನ ಮುಂದೂಡಿಕೆಯಾಗಿದೆ.
ಕೇರಳ ಪ್ರವೇಶಿಸಿದ ಬಳಿಕ ಮುಂಗಾರು ಮಾರುತಗಳು ನೈಋತ್ಯ ಭಾಗಗಳತ್ತ ಸಾಗಲಿದ್ದು, ನಂತರ ಪಶ್ಚಿಮ-ಮಧ್ಯ ಮತ್ತು ಪೂರ್ವ-ಮಧ್ಯ ಭಾರತಕ್ಕೆ ವಿಸ್ತರಿಸಲಿವೆ. ಅಲ್ಲಿಂದ ತಮಿಳುನಾಡು ಹಾಗೂ ಬಂಗಾಳ ಕೊಲ್ಲಿಯ ಭಾಗಗಳತ್ತವೂ ಚಲಿಸುವ ಸಾಧ್ಯತೆ ಇದೆ.
ಈ ವರ್ಷ ಮಳೆಯ ಪ್ರಮಾಣ ಸಾಮಾನ್ಯ ಮಟ್ಟದಲ್ಲೇ ಇರಲಿದ್ದು, ದೀರ್ಘಾವಧಿಯ ಸರಾಸರಿಗೆ ಸಮೀಪವಾದ ಮಳೆ ದೇಶದ ಬಹುತೇಕ ಭಾಗಗಳಲ್ಲಿ ದಾಖಲಾಗುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.



