ಫೋನ್ ಮೂಲಕ ಡೆಲಿವರಿ ಮಾಡಿಸಿದ ಡಾಕ್ಟರ್! ತಾಯಿ ಹಾಗೂ ಮಗು ಸಾವು

ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ವೈದ್ಯೆ ಸ್ಥಳದಲ್ಲಿರದೆ ಫೋನ್ ಮೂಲಕ ಸೂಚನೆ ನೀಡಿ ಡೆಲಿವರಿ ಮಾಡಿಸಿದ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ನಿರ್ಲಕ್ಷ್ಯ ಆರೋಪದ ನಡುವೆ ತಾಯಿ ಮತ್ತು ನವಜಾತ ಶಿಶು ದುರ್ಮರಣ.

ಉತ್ತರ ಪ್ರದೇಶದ ಅಯೋಧ್ಯಾ ಜಿಲ್ಲೆಯ ಫೈಜಾಬಾದ್‌ನಲ್ಲಿ ಸಂಭವಿಸಿದ ಘಟನೆ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಡೆಲಿವರಿ ವೇಳೆ ವೈದ್ಯೆ ಸ್ಥಳದಲ್ಲಿರದೆ ಫೋನ್ ಮೂಲಕ ಸಿಬ್ಬಂದಿಗೆ ಸೂಚನೆ ನೀಡಿದ ಕಾರಣ ತಾಯಿ ಹಾಗೂ ನವಜಾತ ಶಿಶು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೇನಿಗಂಜ್ ಪ್ರದೇಶದ ನಿವಾಸಿ ಸುರೇಶ್ ಯಾದವ್ ಅವರ ಪತ್ನಿ ಸೋನಿ ಯಾದವ್‌ಗೆ ಮಂಗಳವಾರ ರಾತ್ರಿ ತೀವ್ರ ಪ್ರಸವ ವೇದನೆ ಆರಂಭವಾಗಿತ್ತು. ಇದರಿಂದ ಕುಟುಂಬದವರು ತಕ್ಷಣ ಫೈಜಾಬಾದ್‌ನ ಮಾ ಪರಮೇಶ್ವರಿ ದೇವಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ದಿದ್ದರು.

ವೈದ್ಯೆ ಇಲ್ಲದೆ ನಡೆದ ಡೆಲಿವರಿ

ಆಸ್ಪತ್ರೆಯಲ್ಲಿ ವೈದ್ಯೆ ಅಂಜಲಿ ಶ್ರೀವಾಸ್ತವ ಸೋನಿ ಯಾದವ್ ಅವರನ್ನು ಪರೀಕ್ಷಿಸಿ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಳು. ಆದರೆ ಡೆಲಿವರಿ ಸಮಯ ಬಂದಾಗ ವೈದ್ಯೆ ಆಸ್ಪತ್ರೆಯಲ್ಲಿ ಲಭ್ಯವಾಗಿರಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಸಂದರ್ಭ ಫೋನ್ ಮೂಲಕವೇ ಆಸ್ಪತ್ರೆಯ ಸಿಬ್ಬಂದಿಗೆ ಸೂಚನೆ ನೀಡಿದ ವೈದ್ಯೆ, ಅವರಿಂದಲೇ ಡೆಲಿವರಿ ಮಾಡಿಸಿದರೆಂದು ಹೇಳಲಾಗಿದೆ. ಆದರೆ ಸಿಬ್ಬಂದಿಗೆ ಸಾಕಷ್ಟು ಅನುಭವ ಇರಲಿಲ್ಲ ಎಂಬ ಕಾರಣದಿಂದ ಡೆಲಿವರಿ ವೇಳೆ ಸಮಸ್ಯೆಗಳು ಉಂಟಾದವು ಎಂದು ಕುಟುಂಬದವರು ತಿಳಿಸಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಬದಲಾದ ಪರಿಸ್ಥಿತಿ

ಡೆಲಿವರಿ ಆದ ನಂತರ ಮಗು ಉಸಿರಾಡುತ್ತಿಲ್ಲ ಎಂದು ಸಿಬ್ಬಂದಿ ಹೇಳಿದ್ದರಿಂದ ತಂದೆ ಸುರೇಶ್ ಯಾದವ್ ಮಗುವನ್ನು ತಕ್ಷಣ ಇನ್ನೊಂದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಕೆಲವೇ ಸಮಯದ ಬಳಿಕ ಸೋನಿ ಯಾದವ್ ಅವರ ಆರೋಗ್ಯವೂ ಗಂಭೀರವಾಗಿದ್ದು, ಅವರನ್ನು ಕೂಡ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಮೃತಪಟ್ಟರು.

ಆಸ್ಪತ್ರೆ ವಿರುದ್ಧ ಕ್ರಮ

ಈ ಘಟನೆಗೆ ಸಂಬಂಧಿಸಿ ಮೃತೆಯ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ವೈದ್ಯಕೀಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿಕಿತ್ಸೆ ಮತ್ತು ಡೆಲಿವರಿ ಪ್ರಕ್ರಿಯೆಯಲ್ಲಿ ಗಂಭೀರ ನಿರ್ಲಕ್ಷ್ಯ ನಡೆದಿರುವ ಸಾಧ್ಯತೆ ಕಂಡುಬಂದಿದೆ.

ಪ್ರಾಥಮಿಕ ತನಿಖೆಯ ಬಳಿಕ ಸಂಬಂಧಿತ ಖಾಸಗಿ ಆಸ್ಪತ್ರೆಯನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಈ ದುರ್ಘಟನೆಯಿಂದ ಕುಟುಂಬ ದುಃಖದಲ್ಲಿ ಮುಳುಗಿದ್ದು, ನ್ಯಾಯಕ್ಕಾಗಿ ಆಗ್ರಹ ವ್ಯಕ್ತಪಡಿಸಿದೆ.

Related Stories