ಕಲ್ಲಂಗಡಿ ಹಣ್ಣಿನಲ್ಲಿ ಇಲಿಪಾಷಾಣ! ಒಂದೇ ಕುಟುಂಬದ ನಾಲ್ವರ ಸಾವಿಗೆ ಬಿಗ್ ಟ್ವಿಸ್ಟ್
ಮಟನ್ ಬಿರಿಯಾನಿ ಬಳಿಕ ಕಲ್ಲಂಗಡಿ ತಿಂದಿದ್ದ ಮುಂಬೈನ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ವಿಧಿವಿಜ್ಞಾನ ಪರೀಕ್ಷೆಯಲ್ಲಿ ಇಲಿಪಾಷಾಣದ ಅಂಶ ಪತ್ತೆಯಾಗಿದೆ.

- ಕಲ್ಲಂಗಡಿ ಹಣ್ಣಿನಲ್ಲಿ ಇಲಿಪಾಷಾಣ ಪತ್ತೆ
- ಮುಂಬೈ ಕುಟುಂಬದ ನಾಲ್ವರ ಸಾವಿಗೆ ಹೊಸ ಟ್ವಿಸ್ಟ್
- ವಿಧಿವಿಜ್ಞಾನ ವರದಿಯಲ್ಲಿ ಝಿಂಕ್ ಫಾಸ್ಫೈಡ್ ದೃಢ
Mumbai Family Death Twist: ಮುಂಬೈನಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಆರಂಭದಲ್ಲಿ ಮಟನ್ ಬಿರಿಯಾನಿ ಮತ್ತು ಬಳಿಕ ತಿಂದ ಕಲ್ಲಂಗಡಿ ಹಣ್ಣಿನಿಂದ ಫುಡ್ ಪಾಯಿಸನ್ ಆಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಬಂದಿರುವ ವಿಧಿವಿಜ್ಞಾನ ವರದಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಮೃತರ ದೇಹದಲ್ಲಿ ಮತ್ತು ಅವರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನ ಮಾದರಿಯಲ್ಲಿ ಇಲಿಗಳನ್ನು ಕೊಲ್ಲಲು ಬಳಸುವ ಝಿಂಕ್ ಫಾಸ್ಫೈಡ್ ಎಂಬ ವಿಷಕಾರಿ ರಾಸಾಯನಿಕ ಪತ್ತೆಯಾಗಿದೆ. ಈ ಬೆಳವಣಿಗೆ ಪೊಲೀಸರ ತನಿಖೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಕುಟುಂಬದೊಂದಿಗೆ ನಡೆದಿದ್ದ ಔತಣಕೂಟ
ಮೃತರಾದ ಅಬ್ದುಲ್ಲಾ ಡೊಕಾಡಿಯಾ, ಪತ್ನಿ ನಸ್ರೀನ್ ಹಾಗೂ ಇಬ್ಬರು ಪುತ್ರಿಯರು ಕುಟುಂಬ ಸಮೇತರಾಗಿ ತಮ್ಮ ಮನೆಯಲ್ಲಿ ಸಂಬಂಧಿಕರಿಗೆ ಔತಣಕೂಟ ಏರ್ಪಡಿಸಿದ್ದರು. ರಾತ್ರಿ ಊಟಕ್ಕೆ ಮಟನ್ ಬಿರಿಯಾನಿ ಸಿದ್ಧಪಡಿಸಲಾಗಿತ್ತು. ಊಟ ಮುಗಿಸಿ ಅತಿಥಿಗಳು ತೆರಳಿದ ಬಳಿಕ ಕುಟುಂಬದ ನಾಲ್ವರೂ ಮಧ್ಯರಾತ್ರಿ ಕಲ್ಲಂಗಡಿ ಹಣ್ಣು ಸೇವಿಸಿದ್ದಾರೆ ಎನ್ನಲಾಗಿದೆ.
ಬೆಳಗಿನ ಜಾವ ನಾಲ್ವರೂ ತೀವ್ರ ವಾಂತಿ ಮತ್ತು ಭೇದಿಯಿಂದ ಬಳಲತೊಡಗಿದ್ದು, ಕೆಲವೇ ಗಂಟೆಗಳಲ್ಲಿ ಅವರ ಸ್ಥಿತಿ ಗಂಭೀರಗೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ನಾಲ್ವರೂ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸಿದ ಸಂಗತಿ
ಮರಣೋತ್ತರ ಪರೀಕ್ಷೆ ವೇಳೆ ವೈದ್ಯರು ಮೃತರ ದೇಹದ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿದ್ದರು. ಮೆದುಳು, ಹೃದಯ ಹಾಗೂ ಕರುಳುಗಳಲ್ಲಿ ಕಂಡುಬಂದ ಈ ಬದಲಾವಣೆ ವಿಷಪ್ರಾಶನದ ಸ್ಪಷ್ಟ ಲಕ್ಷಣವಾಗಿತ್ತು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ನಂತರ ನಡೆಸಿದ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಝಿಂಕ್ ಫಾಸ್ಫೈಡ್ ಅಂಶ ದೃಢಪಟ್ಟಿದೆ. ಇದು ಸಾಮಾನ್ಯವಾಗಿ ಇಲಿಪಾಷಾಣದಲ್ಲಿ ಬಳಸುವ ಅತ್ಯಂತ ಅಪಾಯಕಾರಿ ರಾಸಾಯನಿಕವಾಗಿದೆ.
ಪೊಲೀಸರ ತನಿಖೆ ತೀವ್ರ
ಈ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿದ್ದು, ಕಲ್ಲಂಗಡಿ ಹಣ್ಣಿಗೆ ಆಕಸ್ಮಿಕವಾಗಿ ವಿಷ ಬೆರೆತಿತ್ತೇ ಅಥವಾ ಉದ್ದೇಶಪೂರ್ವಕವಾಗಿ ಇಂಜೆಕ್ಷನ್ ಮೂಲಕ ಸೇರಿಸಲಾಗಿತ್ತೇ ಎಂಬ ಆಯಾಮದಲ್ಲಿ ಮುಂಬೈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕುಟುಂಬದ ಸಾವಿನ ನಿಜವಾದ ಕಾರಣ ತಿಳಿಯಲು ಪೊಲೀಸರು ಆಹಾರ ಮಾದರಿ, ಮನೆಯ ವಸ್ತುಗಳು ಹಾಗೂ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಹಿಂದಿನ ನಿಜಾಂಶ ತಿಳಿಯಲು ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸುತ್ತಿದ್ದಾರೆ.
ಜನರಲ್ಲಿ ಆತಂಕ
ಒಂದೇ ಕುಟುಂಬದ ನಾಲ್ವರು ಹೀಗೆ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆಹಾರ ಸುರಕ್ಷತೆ ಮತ್ತು ವಿಷಕಾರಿ ಪದಾರ್ಥಗಳ ದುರುಪಯೋಗ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.



