ನೇಪಾಳ ಪ್ರವಾಹ: ಸಾವಿನ ಸಂಖ್ಯೆ 1,050ಕ್ಕೆ ಏರಿಕೆ! 580ಕ್ಕೂ ಹೆಚ್ಚು ವಿದೇಶಿಗರು ನಾಪತ್ತೆ, 163 ಭಾರತೀಯರ ರಕ್ಷಣೆ
Nepal Floods : ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಸಾವಿನ ಸಂಖ್ಯೆ 1,050 ಮೀರಿದ್ದು, 580ಕ್ಕೂ ಹೆಚ್ಚು ವಿದೇಶಿಗರು ನಾಪತ್ತೆಯಾಗಿದ್ದಾರೆ; 163 ಭಾರತೀಯರನ್ನು ರಕ್ಷಿಸಲಾಗಿದೆ.

Nepal Floods News : ನೇಪಾಳದಲ್ಲಿ ಪ್ರವಾಹದ ಜತೆಗೆ ಸಂಭವಿಸಿದ ಭೂಕುಸಿತಗಳು ಹಲವು ಹೆದ್ದಾರಿ ಮತ್ತು ಸೇತುವೆಗಳನ್ನು ಹಾನಿಗೊಳಿಸಿವೆ. ಇದರಿಂದ ಸಂಪರ್ಕ ಕಡಿತಗೊಂಡಿದ್ದ ಪ್ರದೇಶಗಳಿಗೆ ನೆಲಮಾರ್ಗದಲ್ಲಿ ತೆರಳುವುದು ಕಷ್ಟವಾಗಿದ್ದು, ಸೇನೆ ಹಾಗೂ ರಕ್ಷಣಾ ಪಡೆಗಳು ಹೆಲಿಕಾಪ್ಟರ್‌ಗಳ ಮೂಲಕ ಸಂತ್ರಸ್ತರನ್ನು ತಲುಪುತ್ತಿವೆ.
ಜಲಪ್ರಳಯದ ತೀವ್ರತೆಯಿಂದ ಸಾವಿರಾರು ಜನರ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ನೇಪಾಳಿ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ಅಂತಾರಾಷ್ಟ್ರೀಯ ರಕ್ಷಣಾ ತಂಡಗಳು (Rescue Operation) ಸಂತ್ರಸ್ತರ ಹುಡುಕಾಟ, ಸ್ಥಳಾಂತರ ಹಾಗೂ ಪರಿಹಾರ ಸಾಮಗ್ರಿ ವಿತರಣೆಯನ್ನು ಚುರುಕುಗೊಳಿಸಿವೆ.
163 ಭಾರತೀಯರು ಸುರಕ್ಷಿತ
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಪ್ರವಾಹ ಪೀಡಿತ ಪ್ರದೇಶಗಳಿಂದ ಇದುವರೆಗೆ 163 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ (Indian Citizens). ಇದೇ ವೇಳೆ ಚೀನಾದಲ್ಲಿದ್ದ 151 ಭಾರತೀಯರು ಕೂಡ ಇಂದು ಅಲ್ಲಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ.
ರಕ್ಷಣಾ ಕಾರ್ಯಕ್ಕೆ ನೆರವಾಗಲು ಭಾರತವು ತಜ್ಞರ ತಂಡಗಳನ್ನು ನೇಪಾಳಕ್ಕೆ ಕಳುಹಿಸಿದೆ. ಮೃತರು ಮತ್ತು ನಾಪತ್ತೆಯಾದವರ ಗುರುತು ಪತ್ತೆ ಕಾರ್ಯದಲ್ಲೂ ಭಾರತೀಯ ತಜ್ಞರು ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ.
ಸುರಂಗದಲ್ಲಿ ಸಿಲುಕಿರುವವರಿಗಾಗಿ ಕಾರ್ಯಾಚರಣೆ
ಚಿಲಿಮೆ ಪ್ರದೇಶದ ಜಲವಿದ್ಯುತ್ ಯೋಜನೆಯ (Hydropower Project) ಸುರಂಗದಲ್ಲಿ ಭಾರತದ ವಿಶೇಷ ರಕ್ಷಣಾ ತಂಡ ಕಾರ್ಯಾಚರಣೆ ಆರಂಭಿಸಿದೆ. ಸುರಂಗದೊಳಗಿನ ಕಠಿಣ ಪರಿಸ್ಥಿತಿ ರಕ್ಷಣಾ ಕಾರ್ಯಕ್ಕೆ ಸವಾಲಾಗಿದ್ದು, ತಂಡವು ತಾತ್ಕಾಲಿಕ ತೇಲುವ ಸಾಧನಗಳ ನೆರವಿನಿಂದ ಒಳಭಾಗಕ್ಕೆ ತೆರಳುತ್ತಿದೆ.
ಸುರಂಗದಲ್ಲಿ ಸಿಲುಕಿರುವವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಯಲಿದ್ದು, ಬುಧವಾರವೂ ರಕ್ಷಣಾ ಸಿಬ್ಬಂದಿ ಶೋಧ ನಡೆಸಲಿದ್ದಾರೆ.

ಮೃತರ ಗುರುತಿಗೆ ವಿಧಿವಿಜ್ಞಾನ ತಂಡ
ಪ್ರವಾಹದಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚುವ ಕೆಲಸವೂ ಸಮಾನಾಂತರವಾಗಿ ನಡೆಯುತ್ತಿದೆ. ಇದಕ್ಕಾಗಿ ಭಾರತದ ವಿಧಿವಿಜ್ಞಾನ ತಜ್ಞರ (Forensic Team) ತಂಡ ನೇಪಾಳದ ಅಧಿಕಾರಿಗಳೊಂದಿಗೆ ಕೈಜೋಡಿಸಿದೆ.
ಮೃತರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸುವ ಮೂಲಕ ಕುಟುಂಬಗಳಿಗೆ ನಿಖರ ಮಾಹಿತಿ ನೀಡುವ ಪ್ರಯತ್ನ ನಡೆಯುತ್ತಿದೆ.
580ಕ್ಕೂ ಹೆಚ್ಚು ವಿದೇಶಿಗರು ನಾಪತ್ತೆ
ಪ್ರವಾಹದ ಬಳಿಕ ನೇಪಾಳದಲ್ಲಿ 580ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ನಾಪತ್ತೆಯಾಗಿರುವ (Missing Foreigners) ಮಾಹಿತಿ ಹೊರಬಿದ್ದಿದೆ. ಅವರ ಕುಟುಂಬಗಳು ತಮ್ಮವರ ಸುರಕ್ಷತೆ ಬಗ್ಗೆ ಮಾಹಿತಿ ನಿರೀಕ್ಷಿಸುತ್ತಿವೆ.
ಸದ್ಯ ರಕ್ಷಣಾ ಕಾರ್ಯಾಚರಣೆ ಜತೆಗೆ ನಾಪತ್ತೆಯಾದವರ ಪತ್ತೆ, ಮೃತರ ಗುರುತಿಸುವಿಕೆ ಮತ್ತು ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ. ಅಂತಾರಾಷ್ಟ್ರೀಯ ತಂಡಗಳ ಸಹಕಾರದೊಂದಿಗೆ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ವಿಸ್ತರಿಸುವ ನಿರೀಕ್ಷೆಯಿದೆ.
#WATCH | Nepal: A tunnel rescue team from India has partnered with the Nepali Army to undertake joint search and rescue operations at critical hydropower tunnel sites at Chilime, Rasuwa District.
(Video: MEA) pic.twitter.com/4BeCLcaQaF
— ANI (@ANI) September 1, 2026



