ನೇಪಾಳ ಪ್ರವಾಹದಲ್ಲಿ 584 ಸಾವು, 2,500 ಮಂದಿ ನಾಪತ್ತೆ; 320 ಭಾರತೀಯರು ಇನ್ನೂ ಪತ್ತೆಯಾಗಿಲ್ಲ

Nepal Floods: ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಸಾವಿನ ಸಂಖ್ಯೆ 584ಕ್ಕೆ ಏರಿದೆ. 2482 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 320 ಭಾರತೀಯರು ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

  • ನೇಪಾಳ ಪ್ರವಾಹ ಮತ್ತು ಭೂಕುಸಿತಕ್ಕೆ 584 ಮಂದಿ ಬಲಿ
  • ನಾಪತ್ತೆಯಾದವರಲ್ಲಿ 320 ಭಾರತೀಯ ನಾಗರಿಕರು
  • ಪ್ರವಾಹದ ಭೀತಿ ನಡುವೆ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ

ನೇಪಾಳ: ನೇಪಾಳದಲ್ಲಿ ಸುರಿದ ಭಾರಿ ಮಳೆ ಹಾಗೂ ಉಂಟಾದ ಪ್ರವಾಹ (Nepal Floods) ಮತ್ತು ಭೂಕುಸಿತದಿಂದ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ. ನೇಪಾಳ-ಟಿಬೆಟ್ ಗಡಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 584ಕ್ಕೆ ಏರಿಕೆಯಾಗಿದೆ. ಇದೇ ವೇಳೆ ನೇಪಾಳ ಮತ್ತು ಟಿಬೆಟ್ ಭಾಗಗಳಲ್ಲಿ ಒಟ್ಟು 2482 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದವರ ಪಟ್ಟಿಯಲ್ಲಿ 320 ಭಾರತೀಯ ನಾಗರಿಕರೂ ಇರುವುದರಿಂದ ಆತಂಕ ಹೆಚ್ಚಾಗಿದೆ. ದುರ್ಗಮ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಹದಗೆಟ್ಟಿರುವುದು ರಕ್ಷಣಾ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಲವು ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು, ಸುರಂಗಗಳು ಹಾಗೂ ಬೆಟ್ಟ ಪ್ರದೇಶಗಳಲ್ಲಿ ಸಿಲುಕಿರುವವರನ್ನು ತಲುಪುವುದು ಕಷ್ಟಕರವಾಗಿದೆ.

ಈ ನಡುವೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮತ್ತೊಂದು ಪ್ರವಾಹ (Flash Flood) ಸಂಭವಿಸುವ ಆತಂಕವೂ ಎದುರಾಗಿದೆ. ಹೀಗಾಗಿ ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ತಂಡಗಳು ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸುತ್ತಿವೆ. ಪ್ರತಿಕೂಲ ಹವಾಮಾನ ಮತ್ತು ದುರ್ಗಮ ಭೌಗೋಳಿಕ ಪರಿಸ್ಥಿತಿಯಿಂದಾಗಿ ಸಂತ್ರಸ್ತರ ಪತ್ತೆ ಕಾರ್ಯವೂ ನಿಧಾನಗತಿಯಲ್ಲಿ ಸಾಗುತ್ತಿದೆ.

ಭಾರತವೂ ನೆರವಿನ ಹಸ್ತ ಚಾಚಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಅಗತ್ಯ ಸಹಾಯವನ್ನು ಹೆಚ್ಚಿಸಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಹಾಗೂ ನಾಪತ್ತೆಯಾದವರನ್ನು ಪತ್ತೆಹಚ್ಚುವುದು ಸದ್ಯದ ಪ್ರಮುಖ ಆದ್ಯತೆಯಾಗಿದೆ.

ಇತ್ತ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೇಲ್ ಅವರಿಗೆ ಸಂತಾಪ ಸೂಚಿಸಿದ್ದಾರೆ. ಪ್ರಕೃತಿ ವಿಕೋಪದಿಂದ ಉಂಟಾದ ಜೀವಹಾನಿಗೆ ದುಃಖ ವ್ಯಕ್ತಪಡಿಸಿರುವ ಅವರು, ಎರಡೂ ದೇಶಗಳ ಜನರು ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಸಂಕಷ್ಟದಿಂದ ಶೀಘ್ರ ಹೊರಬಂದು ತಮ್ಮ ಬದುಕನ್ನು ಪುನರ್‌ನಿರ್ಮಿಸಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ನೇಪಾಳದಲ್ಲಿರುವ ನಾಪತ್ತೆಯಾದ ಆಸ್ಟ್ರೇಲಿಯಾ ನಾಗರಿಕರ ಸಂಖ್ಯೆಯೂ 41ಕ್ಕೆ ಏರಿಕೆಯಾಗಿದೆ ಎಂದು ಆಸ್ಟ್ರೇಲಿಯಾ ಸರ್ಕಾರದ ಸಚಿವರೊಬ್ಬರು ತಿಳಿಸಿದ್ದಾರೆ. ಶುಕ್ರವಾರ ಈ ಸಂಖ್ಯೆ 39 ಎಂದು ಹೇಳಲಾಗಿತ್ತು. ನಾಪತ್ತೆಯಾಗಿದ್ದ 25 ವರ್ಷದ ಕಾರಾ ಸೆವೆರಿನೋ ಅವರು ಕುಟುಂಬದವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದು, ಅವರು ಸುರಕ್ಷಿತವಾಗಿರುವುದು ತಿಳಿದುಬಂದಿದೆ. ಅವರು ವಿಕೋಪ ಪೀಡಿತ ಪ್ರದೇಶದಿಂದ ದೂರದ ಸ್ಥಳದಲ್ಲಿ ಹೈಕಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.

ಆದರೆ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್ ನಿವಾಸಿ 46 ವರ್ಷದ ರೇಶ್ಮಾ ಪಟೇಲ್ ಅವರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈಶಾ ಫೌಂಡೇಶನ್ ಆಯೋಜಿಸಿದ್ದ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 11 ಆಸ್ಟ್ರೇಲಿಯಾ ನಾಗರಿಕರ ತಂಡದಲ್ಲಿದ್ದರು ಎಂದು ತಿಳಿದುಬಂದಿದೆ.

ರೇಶ್ಮಾ ಅವರ ಸ್ನೇಹಿತೆ ಚಿನ್ ವಾಲ್ಸನ್ ಅವರ ಪ್ರಕಾರ, ವಿಕೋಪದ ಪರಿಣಾಮ ಕಾಣಿಸಿಕೊಳ್ಳುವ ಸುಮಾರು 10 ನಿಮಿಷಗಳ ಮೊದಲು ತಿಬೆಟ್-ನೇಪಾಳ ಗಡಿಯ ಸಮೀಪ ಅವರ ಕೊನೆಯ ಸ್ಥಳ ಮಾಹಿತಿ (Last Location) ದಾಖಲಾಗಿತ್ತು. ಇದೀಗ ರಕ್ಷಣಾ ತಂಡಗಳು ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿವೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories