ಆಧಾರ್ ಕಾರ್ಡ್ ಹೊಸ ನಿಯಮ, ಈ ಮಾಹಿತಿಯನ್ನು ಒಮ್ಮೆ ಮಾತ್ರ ಬದಲಾಯಿಸಲು ಅವಕಾಶ
New Aadhaar Rules; ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಲವು ಬಾರಿ ಬದಲಾಯಿಸಬಹುದು. ಆದರೆ UIDAI ಹೊಸ ನಿಯಮದಂತೆ ಜನ್ಮ ದಿನಾಂಕ ಮತ್ತು ಲಿಂಗದ ಮಾಹಿತಿಯನ್ನು ಜೀವನದಲ್ಲಿ ಒಮ್ಮೆ ಮಾತ್ರ ತಿದ್ದುಪಡಿ ಮಾಡುವ ಅವಕಾಶ ಮಾತ್ರ ನೀಡಲಾಗಿದೆ.

New Aadhaar Rules: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ (Aadhaar Card) ಅತ್ಯಂತ ಮುಖ್ಯವಾದ ಗುರುತಿನ ದಾಖಲೆ ಆಗಿದೆ. ಸರ್ಕಾರದ ವಿವಿಧ ಯೋಜನೆಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಲು ಈ 12 ಅಂಕೆಯ ವಿಶಿಷ್ಟ ಗುರುತು ಸಂಖ್ಯೆಯನ್ನು ಬಳಸಲಾಗುತ್ತದೆ. ಆದ್ದರಿಂದ ಇದರಲ್ಲಿರುವ ಮಾಹಿತಿಯು ಸರಿಯಾಗಿರುವುದು ಬಹಳ ಮುಖ್ಯ.
ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ತಂದೆಯ ಹೆಸರು, ಫೋಟೋ ಹಾಗೂ ಬಯೋಮೆಟ್ರಿಕ್ ಮಾಹಿತಿಗಳಲ್ಲಿ ತಪ್ಪು ಇದ್ದರೆ ಅವನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಎಲ್ಲ ಮಾಹಿತಿಯನ್ನೂ ಅನಿಯಮಿತವಾಗಿ ಬದಲಾಯಿಸಲು ಅವಕಾಶ ಇಲ್ಲ. ಕೆಲವು ವಿವರಗಳಿಗೆ UIDAI ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಒಮ್ಮೆ ಮಾತ್ರ ಬದಲಾಯಿಸಬಹುದಾದ ವಿವರಗಳು
UIDAI ನಿಯಮಗಳ ಪ್ರಕಾರ ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕ (Date of Birth) ಮತ್ತು ಲಿಂಗ (Gender) ಮಾಹಿತಿಯನ್ನು ಜೀವನದಲ್ಲಿ ಕೇವಲ ಒಂದು ಬಾರಿ ಮಾತ್ರ ಬದಲಾಯಿಸಲು ಅವಕಾಶ ಇದೆ. ಇದರ ನಂತರ ಮತ್ತೆ ಬದಲಾಯಿಸುವ ಅವಕಾಶ ಇರುವುದಿಲ್ಲ.
ಹಿಂದೆ ಕೆಲವರು ಸರ್ಕಾರದ ವಿವಿಧ ಯೋಜನೆಗಳು ಅಥವಾ ಪಿಂಚಣಿ ಪಡೆಯಲು ತಮ್ಮ ವಯಸ್ಸನ್ನು ಹೆಚ್ಚಾಗಿ ತೋರಿಸಲು ಜನ್ಮ ದಿನಾಂಕವನ್ನು ಹಲವು ಬಾರಿ ಬದಲಾಯಿಸುತ್ತಿದ್ದರು. ಇಂತಹ ದುರುಪಯೋಗಗಳನ್ನು ತಡೆಯಲು UIDAI ಈ ನಿಯಮವನ್ನು ಕಠಿಣವಾಗಿ ಜಾರಿಗೆ ತಂದಿದೆ. ಇದೇ ಕಾರಣದಿಂದ ಈಗ ಜನ್ಮ ದಿನಾಂಕ ತಿದ್ದುಪಡಿ ಮೇಲೆ ಮಿತಿ ವಿಧಿಸಲಾಗಿದೆ.
ಮೊಬೈಲ್ ಆಪ್ ಮೂಲಕ ಅಪ್ಡೇಟ್ ಸೌಲಭ್ಯ
ಇತ್ತೀಚೆಗೆ UIDAI ಹೊಸ ಆಧಾರ್ ಮೊಬೈಲ್ ಆಪ್ ಅನ್ನು ಪರಿಚಯಿಸಿದೆ. ಇದರ ಮೂಲಕ ಕೆಲವು ವಿವರಗಳನ್ನು ಆನ್ಲೈನ್ ಮೂಲಕವೇ ಅಪ್ಡೇಟ್ ಮಾಡಿಕೊಳ್ಳಬಹುದು. ಜನ್ಮ ದಿನಾಂಕವನ್ನು ಬದಲಾಯಿಸ ಬೇಕಾದರೆ ಜನನ ಪ್ರಮಾಣ ಪತ್ರ ಅಥವಾ 10ನೇ ತರಗತಿ ಪ್ರಮಾಣ ಪತ್ರದಂತಹ ದಾಖಲೆಗಳನ್ನು ಸಲ್ಲಿಸಬೇಕು.
ಹಿಂದೆ ಈ ರೀತಿಯ ತಿದ್ದುಪಡಿ ಮಾಡಲು ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದು ಅನಿವಾರ್ಯವಾಗಿತ್ತು. ಗ್ರಾಮೀಣ ಪ್ರದೇಶದ ಜನರಿಗೆ ಇದು ದೊಡ್ಡ ತೊಂದರೆಯಾಗುತ್ತಿತ್ತು. ಆದರೆ ಈಗ ಮೊಬೈಲ್ ಆಪ್ ಮೂಲಕವೇ ಹಲವು ಸೇವೆಗಳು ಲಭ್ಯವಾಗುತ್ತಿರುವುದರಿಂದ ಜನರಿಗೆ ಹೆಚ್ಚು ಸುಲಭವಾಗಿದೆ.






