ಪುರಿ ಜಗನ್ನಾಥ ದೇವಾಲಯದಲ್ಲಿ ದರ್ಶನಕ್ಕೆ ಹೊಸ ವ್ಯವಸ್ಥೆ, ಜನವರಿ 1ರಿಂದ ಜಾರಿ
ಪುರಿ ಜಗನ್ನಾಥನ ಪ್ರಸಿದ್ಧ ದೇಗುಲಕ್ಕೆ ಭಕ್ತರಿಗೆ ಭೇಟಿ ನೀಡಲು ಉತ್ತಮ ಸೌಲಭ್ಯಗಳನ್ನು ಒದಗಿಸಲು ಒಡಿಶಾ ಸರ್ಕಾರ ಹೊಸ ವಿಧಾನ ಪ್ರಾರಂಭಿಸಲಿದೆ. ಜನವರಿ 1 ರಿಂದ ಈ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು
- ಪುರಿ ಜಗನ್ನಾಥ ದೇಗುಲದಲ್ಲಿ ಜನವರಿ 1ರಿಂದ ಹೊಸ ದರ್ಶನ ವ್ಯವಸ್ಥೆ.
- ಮಹಿಳೆ, ಮಕ್ಕಳು, ವೃದ್ಧರು, ಅಂಗವಿಕಲರಿಗೆ ವಿಶೇಷ ಸೌಲಭ್ಯ.
- ಭಕ್ತರ ನೂಕುನುಗ್ಗಲ ನಿಯಂತ್ರಣಕ್ಕಾಗಿ ವಿಶೇಷ ಬ್ಯಾರಿಕೇಡ್ ಗಳ ವ್ಯವಸ್ಥೆ.
ಪುರಿ ಜಗನ್ನಾಥನ ಪ್ರಸಿದ್ಧ ದೇಗುಲಕ್ಕೆ (Puri Jagannath Temple) ಭಕ್ತರಿಗೆ ಭೇಟಿ ನೀಡಲು ಉತ್ತಮ ಸೌಲಭ್ಯಗಳನ್ನು ಒದಗಿಸಲು ಒಡಿಶಾ ಸರ್ಕಾರ ಹೊಸ ವಿಧಾನವನ್ನು ಪ್ರಾರಂಭಿಸಲಿದೆ. ಜನವರಿ 1 ರಿಂದ ಈ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು ಎಂದು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಭಾನುವಾರ ಹೇಳಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿ ಅಗತ್ಯ ವ್ಯವಸ್ಥೆ ಮಾಡುತ್ತಿದೆ ಎಂದರು. ಇದೇ 27 ಮತ್ತು 28ರಂದು ಹೊಸ ನೀತಿಯ ವ್ಯವಸ್ಥೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಡಿಸೆಂಬರ್ 30 ಮತ್ತು 31ರಂದು ಪ್ರಾಯೋಗಿಕವಾಗಿ ಆರಂಭಿಸಲಾಗುವುದು. ಜನವರಿ 1ರಿಂದ ಹೊಸ ದರ್ಶನ ವ್ಯವಸ್ಥೆ ಸಂಪೂರ್ಣವಾಗಿ ಜಾರಿಯಾಗಲಿದೆ.
ಈ ಹೊಸ ವ್ಯವಸ್ಥೆಯಲ್ಲಿ ದೇವಸ್ಥಾನಕ್ಕೆ ಬರುವ ಮಹಿಳೆಯರು, ಮಕ್ಕಳು, ಅಂಗವಿಕಲರು, ವೃದ್ಧರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಹೊಸ ವ್ಯವಸ್ಥೆಯಲ್ಲಿ, ಭಕ್ತರು ಜಗನ್ನಾಥ ದೇವಾಲಯವನ್ನು ಅಸ್ತಿತ್ವದಲ್ಲಿರುವ ದ್ವಾರದ ಮೂಲಕ ಪ್ರವೇಶಿಸುತ್ತಾರೆ.
ಭಕ್ತರ ನೂಕುನುಗ್ಗಲಿನಿಂದ ಗರ್ಭಗುಡಿಯಲ್ಲಿರುವ ದೇವತಾ ಮೂರ್ತಿಗಳ ದರ್ಶನಕ್ಕೆ ಆಗಾಗ ತೊಂದರೆಯಾಗುತ್ತಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಹೊಸ ವ್ಯವಸ್ಥೆಯಡಿ ವಿಶೇಷ ಬ್ಯಾರಿಕೇಡ್ ಗಳನ್ನು ಹಾಕಲು ಯೋಜನೆ ರೂಪಿಸಲಾಗುತ್ತಿದೆ.
New Darshan System Will Be Implemented In Sri Jagannath Temple From January 1