ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಹೊಸ ನಿಯಮಗಳು, ಸರ್ಕಾರದಿಂದ ಹೊಸ ರೂಲ್ಸ್
ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹೊಸ ಬಾಡಿಗೆ ನಿಯಮಗಳನ್ನು ಜಾರಿಗೆ ತಂದಿದೆ. ಅಗ್ರಿಮೆಂಟ್, ಅಡ್ವಾನ್ಸ್ ಹಣ, ಬಾಡಿಗೆ ಹೆಚ್ಚಳ ಕುರಿತಾಗಿ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ನಗರಗಳು ಮತ್ತು ಪಟ್ಟಣಗಳಲ್ಲಿ ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕಾರಣಗಳಿಂದ ಸಾವಿರಾರು ಮಂದಿ ಬಾಡಿಗೆ ಮನೆಗಳಲ್ಲಿ (Rent House) ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಡಿಗೆದಾರರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಹೊಸ ಬಾಡಿಗೆ ಮನೆ ನಿಯಮಗಳು (Rent Rules) ಜಾರಿಗೆ ತಂದಿದೆ.
ಈ ಹೊಸ ನಿಯಮಗಳ ಮೂಲಕ ಮನೆ ಮಾಲೀಕರು ಹಾಗೂ ಬಾಡಿಗೆದಾರರು ಎರಡೂ ಪಕ್ಷಗಳು ಅನುಸರಿಸಬೇಕಾದ ಕೆಲವು ಸ್ಪಷ್ಟ ನಿಯಮಗಳನ್ನು ಸರ್ಕಾರ ಪ್ರಕಟಿಸಿದೆ. ಬಾಡಿಗೆ ಒಪ್ಪಂದ, ಅಡ್ವಾನ್ಸ್ ಹಣ ಹಾಗೂ ಬಾಡಿಗೆ ಹೆಚ್ಚಳದ ಬಗ್ಗೆ ಇವು ಮಾರ್ಗಸೂಚಿಗಳನ್ನು ನೀಡುತ್ತವೆ.
60 ದಿನಗಳೊಳಗೆ ಒಪ್ಪಂದ ಕಡ್ಡಾಯ
ಹೊಸ ನಿಯಮಗಳ ಪ್ರಕಾರ ಬಾಡಿಗೆದಾರರು ಮತ್ತು ಮನೆ ಮಾಲೀಕರು 60 ದಿನಗಳೊಳಗೆ ಬಾಡಿಗೆ ಒಪ್ಪಂದ (Rental Agreement) ಮಾಡಿಕೊಳ್ಳಬೇಕು. ಈ ಒಪ್ಪಂದವನ್ನು ಆನ್ಲೈನ್ ಮೂಲಕ ನೋಂದಾಯಿಸುವುದು ಕಡ್ಡಾಯವಾಗಿದೆ.
ಒಪ್ಪಂದವನ್ನು 60 ದಿನಗಳೊಳಗೆ ನೋಂದಾಯಿಸದಿದ್ದರೆ ಸುಮಾರು ₹5,000 ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಮೌಖಿಕ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇರುವುದಿಲ್ಲ. ನಕಲಿ ಒಪ್ಪಂದಗಳು ಅಥವಾ ಕಾನೂನುಬಾಹಿರವಾಗಿ ಬಾಡಿಗೆದಾರರನ್ನು ಹೊರಹಾಕುವ ಘಟನೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಅಡ್ವಾನ್ಸ್ ಹಣಕ್ಕೆ ಮಿತಿ
ಹೊಸ ನಿಯಮಗಳ ಪ್ರಕಾರ ಗೃಹ ಬಳಕೆಗೆ ನೀಡುವ ಬಾಡಿಗೆ ಮನೆಗಳಿಗೆ ಎರಡು ತಿಂಗಳ ಅಡ್ವಾನ್ಸ್ ಮಾತ್ರ ಪಡೆಯಲು ಅವಕಾಶ ಇದೆ.
ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ನೀಡುವ ಕಟ್ಟಡಗಳ ವಿಚಾರದಲ್ಲಿ ಮಾತ್ರ ಆರು ತಿಂಗಳ ಅಡ್ವಾನ್ಸ್ ಪಡೆಯಬಹುದು. ಕೆಲ ಮನೆ ಮಾಲೀಕರು 10 ತಿಂಗಳು ಅಥವಾ ಒಂದು ವರ್ಷದ ಅಡ್ವಾನ್ಸ್ ಹಣವನ್ನು ಮುಂಚಿತವಾಗಿ ಪಡೆಯುವ ಪ್ರಕ್ರಿಯೆ ಇದ್ದು, ಇದು ಹೊಸ ನಿಯಮಗಳ ಪ್ರಕಾರ ಕಾನೂನುಬಾಹಿರವಾಗುತ್ತದೆ.
ವರ್ಷಕ್ಕೆ ಒಂದೇ ಬಾರಿ ಬಾಡಿಗೆ ಹೆಚ್ಚಳ
ಮನೆ ಮಾಲೀಕರು ಯಾವಾಗ ಬೇಕಾದರೂ ಬಾಡಿಗೆ ಹೆಚ್ಚಿಸಲು ಸಾಧ್ಯವಿಲ್ಲ. ವರ್ಷಕ್ಕೆ ಒಂದೇ ಬಾರಿ ಬಾಡಿಗೆ ಹೆಚ್ಚಳ ಮಾಡಲು ಅವಕಾಶ ಇದೆ.
ಇದೇ ವೇಳೆ ಬಾಡಿಗೆ ಹೆಚ್ಚಳ ಮಾಡುವ ಮೊದಲು ಮೂರು ತಿಂಗಳ ಮುಂಚಿತವಾಗಿ ಬಾಡಿಗೆದಾರರಿಗೆ ಮಾಹಿತಿ ನೀಡುವುದು ಕಡ್ಡಾಯ. ಇದರಿಂದ ಬಾಡಿಗೆದಾರರು ಹೊಸ ಪರಿಸ್ಥಿತಿಗೆ ಸಿದ್ಧರಾಗಲು ಸಮಯ ಸಿಗುತ್ತದೆ.
ಬಾಡಿಗೆದಾರರಿಗೂ ಕಾನೂನು ರಕ್ಷಣೆ
ಬಾಡಿಗೆದಾರರು ಬಾಡಿಗೆ ಪಾವತಿಸದೇ ಇದ್ದರೆ ಅಥವಾ ಮನೆಗೆ ಹಾನಿ ಮಾಡಿದರೆ ಮನೆ ಮಾಲೀಕರು ಟ್ರಿಬ್ಯೂನಲ್ನಲ್ಲಿ ದೂರು ಸಲ್ಲಿಸಬಹುದು.
ಆದರೆ ಯಾವುದೇ ಕಾನೂನು ನೋಟಿಸ್ ನೀಡದೇ ಬಾಡಿಗೆದಾರರನ್ನು ಮನೆ ಖಾಲಿ ಮಾಡಿಸುವುದು ಅಥವಾ ಮನೆಗೆ ಬೀಗ ಹಾಕುವುದು ಕಾನೂನುಬಾಹಿರ. ಮನೆ ಮಾಲೀಕರು ವಿದ್ಯುತ್ ಅಥವಾ ನೀರಿನ ಸಂಪರ್ಕವನ್ನು ಕಟ್ ಮಾಡುವಂತಿಲ್ಲ. ಇಂತಹ ಘಟನೆಗಳು ನಡೆದರೆ ಬಾಡಿಗೆದಾರರು ಕಾನೂನು ಕ್ರಮಕ್ಕೆ ಹೋಗಬಹುದು.
ನಗರಗಳಲ್ಲಿ ಹೆಚ್ಚಿನವರಿಗೆ ಉಪಯೋಗ
ಇಂದಿನ ದಿನಗಳಲ್ಲಿ ನಗರಗಳಲ್ಲಿ ಲಕ್ಷಾಂತರ ಮಂದಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ನಿಯಮಗಳ ಬಗ್ಗೆ ಹಲವರಿಗೆ ಅರಿವು ಇರುವುದಿಲ್ಲ. ಹೊಸ ನಿಯಮಗಳು ಬಾಡಿಗೆದಾರರಿಗೆ ಸುರಕ್ಷತೆ ನೀಡುವ ಜೊತೆಗೆ ಮನೆ ಮಾಲೀಕರಿಗೂ ಸ್ಪಷ್ಟ ಕಾನೂನು ವ್ಯವಸ್ಥೆಯನ್ನು ಒದಗಿಸುತ್ತವೆ.






