ಕೆಮ್ಮಿನ ಸಿರಪ್ ಮಾರಾಟಕ್ಕೆ ಹೊಸ ನಿಯಮ! ಕೇಂದ್ರ ಸರ್ಕಾರ ಮಹತ್ವದ ಕ್ರಮ
ನಕಲಿ ಔಷಧಗಳ ಮಾರಾಟ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಪರವಾನಗಿ ಇಲ್ಲದ ಅಂಗಡಿಗಳಲ್ಲಿ ಕೆಮ್ಮಿನ ಸಿರಪ್ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶದಲ್ಲಿ ನಕಲಿ ಹಾಗೂ ಗುಣಮಟ್ಟವಿಲ್ಲದ ಔಷಧಗಳ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೆಮ್ಮಿನ ಸಿರಪ್ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಲಾಗಿದೆ.
ಈವರೆಗೆ ಕೆಲವು ಸಣ್ಣ ಗ್ರಾಮಗಳಲ್ಲಿ ನಿರ್ದಿಷ್ಟ ಷರತ್ತುಗಳಡಿ ಔಷಧ ಮಾರಾಟಕ್ಕೆ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಇದೀಗ ಆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಕೆಮ್ಮಿನ ಸಿರಪ್ ಸೇರಿದಂತೆ ನಿರ್ದಿಷ್ಟ ಔಷಧಿಗಳನ್ನು ಕೇವಲ ಪರವಾನಗಿ ಪಡೆದ ಮೆಡಿಕಲ್ ಅಂಗಡಿಗಳ ಮೂಲಕವೇ ಮಾರಾಟ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ.
ಕೇಂದ್ರ ಸರ್ಕಾರ ಈ ಸಂಬಂಧ ಡ್ರಗ್ಸ್ ರೂಲ್ಸ್-1945 ಅಡಿಯಲ್ಲಿ ತಿದ್ದುಪಡಿ ಮಾಡಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರ ಉದ್ದೇಶ ಔಷಧ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ನಕಲಿ ಔಷಧಗಳ ಹರಡುವಿಕೆಯನ್ನು ತಡೆಯುವುದಾಗಿದೆ.
ಹೊಸ ನಿಯಮದ ಪ್ರಕಾರ, ಗ್ರಾಮವಾಗಲಿ ನಗರವಾಗಲಿ, ಸೂಕ್ತ ಡ್ರಗ್ ಲೈಸೆನ್ಸ್ ಇಲ್ಲದ ಅಂಗಡಿಗಳಲ್ಲಿ ಕೆಮ್ಮಿನ ಸಿರಪ್ ಮಾರಾಟ ನಡೆಸಲು ಅವಕಾಶ ಇರುವುದಿಲ್ಲ. ಔಷಧ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಿಸಿದ ಪರವಾನಗಿಯನ್ನು ರದ್ದುಪಡಿಸುವ ಜೊತೆಗೆ ಕಾನೂನು ಕ್ರಮಕ್ಕೂ ಅವಕಾಶವಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ಗುಣಮಟ್ಟದ ಔಷಧ ಲಭ್ಯತೆಯನ್ನು ಖಚಿತಪಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ ಕ್ರಮ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮ ವೈದ್ಯಕೀಯ ಸೇವೆಗಳಿಗೆ ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.



