ಆಕ್ಸಿಜನ್ ಸಿಲಿಂಡರ್ ಸ್ಫೋಟಕ್ಕೆ ಓರ್ವ ಬಲಿ! ನಾಲ್ವರಿಗೆ ಗಂಭೀರ ಗಾಯ
ದೆಹಲಿಯ ಓಖ್ಲಾ ಫೇಸ್-1ರಲ್ಲಿ ಸಮುದಾಯ ಭವನದಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ಕಾರಣ ಪತ್ತೆಯಾಗಿಲ್ಲ; ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

- ಆಕ್ಸಿಜನ್ ಸಿಲಿಂಡರ್ ಸ್ಫೋಟ; ಒಬ್ಬರು ಸಾವು
- ಓಖ್ಲಾ ಫೇಸ್-1ನಲ್ಲಿ ನಾಲ್ವರಿಗೆ ಗಾಯ
- ದೆಹಲಿ ಪೊಲೀಸರಿಂದ ತನಿಖೆ ಆರಂಭ
ನವದೆಹಲಿ (Delhi): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು (Oxygen Cylinder Blast) ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಓಖ್ಲಾ ಫೇಸ್-1 (Okhla Phase-1)ನ ಸಮುದಾಯ ಭವನದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 11.30ರ ವೇಳೆಗೆ ಸಮುದಾಯ ಭವನದಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.
ಘಟನೆ ಕುರಿತು ಬೆಳಗ್ಗೆ 11.55ರ ಸುಮಾರಿಗೆ ಪೊಲೀಸರಿಗೆ ಮತ್ತು ಅಗ್ನಿಶಾಮಕ ಇಲಾಖೆಗೆ (Fire Department) ಮಾಹಿತಿ ತಲುಪಿದೆ. ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯ ಆರಂಭಿಸಿದ್ದಾರೆ.
ಗಾಯಗೊಂಡವರನ್ನು ತಕ್ಷಣ ಅಂಬುಲೆನ್ಸ್‌ಗಳ ಮೂಲಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ (Postmortem) ಕಳುಹಿಸಿದ್ದಾರೆ.
ಸಿಲಿಂಡರ್ ಸ್ಫೋಟಕ್ಕೆ ನಿಖರವಾಗಿ ಏನು ಕಾರಣ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು (Delhi Police) ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಸಿಲಿಂಡರ್‌ನ ಸ್ಥಿತಿ, ಬಳಕೆ ಹಾಗೂ ಸ್ಫೋಟಕ್ಕೆ ಕಾರಣವಾಗಬಹುದಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಈ ನಡುವೆ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸತ್ಯನಿಕೇತನ ಪಿಜಿ ಹಾಸ್ಟೆಲ್ ಕಟ್ಟಡ ಕುಸಿತದ ಘಟನೆ ಕೂಡ ಮತ್ತೆ ಚರ್ಚೆಗೆ ಬಂದಿದೆ. ಆ ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದರು ಎಂದು ವರದಿಯಾಗಿದೆ.
ಹಾಸ್ಟೆಲ್ ಕಟ್ಟಡ ಕುಸಿತ ಪ್ರಕರಣದಲ್ಲಿ ಕಟ್ಟಡದ ಮಾಲೀಕ ಹರಿರಾಂ, ಅವರ ಪತ್ನಿ ಊರ್ಮಿಳಾ ಮತ್ತು ಪುತ್ರ ಮಹೇಶ್ ಬನ್ಸಲ್ ಅವರನ್ನು ಪೊಲೀಸರು ಬಂಧಿಸಿದ್ದರು. ಕಟ್ಟಡವನ್ನು ಶುಭಂ ತ್ಯಾಗಿ ಮತ್ತು ಶುಭಾನ್ಶು ಅವರಿಗೆ ಲೀಸ್‌ಗೆ ನೀಡಲಾಗಿತ್ತು ಎಂಬ ಮಾಹಿತಿ ವಿಚಾರಣೆ ವೇಳೆ ಹೊರಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಭಾನ್ಶುವನ್ನೂ ಪೊಲೀಸರು ಬಂಧಿಸಿದ್ದು, ಶುಭಂ ತ್ಯಾಗಿಗಾಗಿ ಹುಡುಕಾಟ ಮುಂದುವರಿದಿತ್ತು. ‘ಹಾಸ್ಟಲ್ ಡೇಸ್’ ಹೆಸರಿನಲ್ಲಿ ಪಿಜಿ ನಡೆಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಎರಡೂ ಘಟನೆಗಳ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.




