ಮಹಾರಾಷ್ಟ್ರ: ಶಿಶುವಿಹಾರದಲ್ಲಿ ಮಗುವಿಗೆ 25ಕ್ಕೂ ಹೆಚ್ಚು ಬಾರಿ ಕಚ್ಚಿದ ಇನ್ನೊಂದು ಮಗು

ಮಹಾರಾಷ್ಟ್ರದ ಖಾಸಗಿ ಶಿಶುವಿಹಾರದಲ್ಲಿ 23 ತಿಂಗಳ ಮಗುವಿನ ಮೇಲೆ ಮತ್ತೊಂದು ಮಗು ಹಲವು ಬಾರಿ ಕಚ್ಚಿದ ಘಟನೆ ಬೆಳಕಿಗೆ ಬಂದಿದೆ. ಸಿಬ್ಬಂದಿ ನಿರ್ಲಕ್ಷ್ಯದ ಆರೋಪದಡಿ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖಾಸಗಿ ಶಿಶುವಿಹಾರದಲ್ಲಿ ನಡೆದ ಆಘಾತಕಾರಿ ಘಟನೆ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಡೇಕೇರ್ ಕೇಂದ್ರದಲ್ಲಿ 23 ತಿಂಗಳ ಮಗುವಿಗೆ ಮತ್ತೊಂದು ಮಗು 25ಕ್ಕೂ ಹೆಚ್ಚು ಬಾರಿ ಕಚ್ಚಿದ ಘಟನೆ ಬೆಳಕಿಗೆ ಬಂದಿದ್ದು, ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.

ಜೂನ್ 22ರಂದು ಈ ಘಟನೆ ನಡೆದಿದ್ದು, ಮೂರು ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಬಿಟ್ಟು ಸುಮಾರು ಅರ್ಧ ಗಂಟೆ ಸಿಬ್ಬಂದಿ ಗಮನಹರಿಸದೆ ಇದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಗುವಿನ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿದ ಗಾಯಗಳಾಗಿದ್ದರೂ, ಡೇಕೇರ್ ಸಿಬ್ಬಂದಿ ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಲಿಲ್ಲ ಎಂದು ಆರೋಪಿಸಲಾಗಿದೆ. ಘಟನೆಯನ್ನು ಮರೆಮಾಚಲು ಪ್ರಯತ್ನಿಸಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ.

ಮಗುವಿನ ಪೋಷಕರ ಹೇಳಿಕೆಯ ಪ್ರಕಾರ, ಪ್ರಕರಣವನ್ನು ಬಹಿರಂಗಪಡಿಸದಂತೆ ಮನವೊಲಿಸಲು ಡೇಕೇರ್ ಆಡಳಿತವು 10 ಲಕ್ಷ ರೂಪಾಯಿ ಪರಿಹಾರ ಹಾಗೂ ಮೂರು ವರ್ಷ ಉಚಿತ ಶಿಕ್ಷಣ ನೀಡುವ ಪ್ರಸ್ತಾಪ ಮಾಡಿದೆ ಎನ್ನಲಾಗಿದೆ. ಆದರೆ ಈ ಆರೋಪಗಳ ಕುರಿತು ಸಂಬಂಧಪಟ್ಟ ಸಂಸ್ಥೆಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.

ಈ ಘಟನೆ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಡೇಕೇರ್ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಘಟನೆಯ ಸಂಪೂರ್ಣ ವಿವರಗಳ ಕುರಿತು ತನಿಖೆ ಮುಂದುವರಿದಿದೆ. ಮಕ್ಕಳ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories