ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಪಿಎಂ-ಕಿಸಾನ್ ಯೋಜನೆಯ 21ನೇ ಕಂತು ಬಿಡುಗಡೆ ಮಾಡಿ ದೇಶದ 9 ಕೋಟಿ ರೈತರಿಗೆ 18,000 ಕೋಟಿ ರೂ. ವಿತರಿಸಿದರು. ಅರ್ಹರು pmkisan.gov.in ನಲ್ಲಿ ನೋಂದಾಯಿಸಿ ವಾರ್ಷಿಕ 6,000 ರೂ. ಪಡೆಯಬಹುದು.

ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿಗೆ ಸಂಬಂಧಿಸಿದಂತೆ ಇಂದು ದೇಶದ ರೈತರಿಗೆ ದೊಡ್ಡ ಸಂಭ್ರಮದ ದಿನವಾಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಯೋಜಿಸಿದ್ದ ನೈಸರ್ಗಿಕ ಕೃಷಿ ಶೃಂಗಸಭೆ ಉದ್ಘಾಟನಾ ವೇದಿಕೆಯಿಂದಲೇ ಪ್ರಧಾನಮಂತ್ರಿ ನರೇಂದ್ರ ಮೋದಿ 18,000 ಕೋಟಿಗೂ ಹೆಚ್ಚು ಮೊತ್ತವನ್ನು ರೈತರ ಖಾತೆಗೆ (Bank Account) ವರ್ಗಾಯಿಸಿದರು.
ಈ ಯೋಜನೆಯಡಿ ಭಾರತೀಯ ರೈತರಿಗೆ ವಾರ್ಷಿಕ ₹6,000 ಹಣ ನೇರವಾಗಿ ಒದಗಿಸಲಾಗುತ್ತದೆ. ಪ್ರತೀ ನಾಲ್ಕು ತಿಂಗಳಿಗೆ ₹2,000 ರೂಗಳಂತೆ ಕಂತುಗಳನ್ನು ಠೇವಣಿ ಮಾಡುವ ಪದ್ಧತಿ ಮುಂದುವರಿದಿದ್ದು, ದೇಶದ 9 ಕೋಟಿ ರೈತರಿಗೆ ಇದರ ಲಾಭ ತಲುಪಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮುನ್ಸೂಚನೆಯಂತೆ ಆಗಸ್ಟ್ನಲ್ಲಿ ಬಿಡುಗಡೆಯಾದ 20ನೇ ಕಂತು 9.8 ಕೋಟಿ ರೈತರಿಗೆ ತಲುಪಿತ್ತು. ಇದರಲ್ಲಿ 2.4 ಕೋಟಿ ಮಹಿಳಾ ರೈತರು ಕೂಡ ಸೇರಿದ್ದಾರೆ. ಯೋಜನೆ ಪ್ರಾರಂಭವಾದ ನಂತರದ ಮೊದಲ 20 ಕಂತುಗಳಲ್ಲೇ 3.90 ಲಕ್ಷ ಕೋಟಿ ರೂ. ಗಿಂತಲೂ ಹೆಚ್ಚು ಮೊತ್ತ ರೈತರ ಖಾತೆಗೆ ಸೇರಿರುವುದು ಈ ಯೋಜನೆಯ ಪ್ರಭಾವವನ್ನು ತೋರಿಸುತ್ತದೆ.
ಅರ್ಹ ರೈತರು pmkisan.gov.in ವೆಬ್ಸೈಟ್ ಮೂಲಕ ಹೊಸ ನೋಂದಣಿ ಮಾಡಿಕೊಳ್ಳಬಹುದು. ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ ‘New Farmer Registration’ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ರಾಜ್ಯದ ವಿವರ ನೀಡಿ OTP ಮೂಲಕ ಮುಂದುವರಿಸಬೇಕು. ನಂತರ ಹೆಸರು, ಭೂಮಿ ದಾಖಲೆ ಮತ್ತು ಪಹಣಿ ಪ್ರತಿಗಳನ್ನು ಸಲ್ಲಿಸಿ ಅರ್ಜಿ ಪೂರ್ಣಗೊಳಿಸಬಹುದು.
ಯಾರಾದರೂ ಫಲಾನುಭವಿಗಳಾಗಿದ್ದರೂ ಕಂತು ತಲುಪದಿದ್ದರೆ, ಸ್ಥಳೀಯ ಕೃಷಿ ಕಚೇರಿ ಅಥವಾ CSC ಕೇಂದ್ರಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳುವುದು ಅಗತ್ಯ. ಬ್ಯಾಂಕ್ ವಿವರ, ಆಧಾರ್ KYC ಅಥವಾ ಸೀಡಿಂಗ್ ಸಮಸ್ಯೆಗಳಿಂದ ಕಂತು ತಡೆಹಿಡಿಯುವ ಸಂಭವವಿದೆ. ಕೇಂದ್ರದ ಸಿಬ್ಬಂದಿ ಈ ಅಡಚಣೆಗಳನ್ನು ತ್ವರಿತವಾಗಿ ಸರಿಪಡಿಸುತ್ತಾರೆ.
ರೈತರ ಖಾತೆಗೆ ಇಂದು ತಲುಪಿದ 21ನೇ ಕಂತಿನಿಂದ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಬಲ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
PM-Kisan 21st Installment Released for 9 Crore Farmers



