ಪಿಎಂ ಕಿಸಾನ್ 21ನೇ ಹಂತದ ಹಣ ಯಾವಾಗ ಬಿಡುಗಡೆ? ರೈತರಿಗೆ ಹೊಸ ಅಪ್‌ಡೇಟ್

ಪಿಎಂ ಕಿಸಾನ್ ಯೋಜನೆಯ 21ನೇ ಹಂತದ ಹಣಕ್ಕಾಗಿ ದೇಶದ ರೈತರು ಕಾಯುತ್ತಿದ್ದಾರೆ. ಕೆಲ ರಾಜ್ಯಗಳಲ್ಲಿ ಮೊತ್ತ ಬಿಡುಗಡೆ ಆರಂಭವಾಗಿದೆ. ಉಳಿದ ರಾಜ್ಯಗಳಲ್ಲಿ ದೀಪಾವಳಿ ಮುಂಚೆ ಹಣ ಬರಬಹುದೆಂಬ ನಿರೀಕ್ಷೆ ಇದೆ.

ದೇಶದಾದ್ಯಂತ ಲಕ್ಷಾಂತರ ರೈತರು ಪಿಎಂ ಕಿಸಾನ್ (PM Kisan) ಯೋಜನೆಯ 21ನೇ ಹಂತದ ಹಣಕ್ಕಾಗಿ ಕಾದು ಕುಳಿತಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 20ನೇ ಹಂತದ ಮೊತ್ತವನ್ನು ಬಿಡುಗಡೆ ಮಾಡಿದ್ದರು. ಆ ಮೊತ್ತವು 9.8 ಕೋಟಿಗೂ ಹೆಚ್ಚು ರೈತರಿಗೆ ತಲುಪಿತ್ತು, ಇದರಲ್ಲಿ 2.4 ಕೋಟಿ ಮಹಿಳಾ ರೈತರು ಸೇರಿದ್ದಾರೆ.

ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ ₹6,000 ಸಹಾಯ ನೀಡಲಾಗುತ್ತದೆ, ಪ್ರತಿ ನಾಲ್ಕು ತಿಂಗಳಿಗೆ ₹2,000ರಂತೆ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಈಗ 21ನೇ ಹಂತದ ಮೊತ್ತದ ನಿರೀಕ್ಷೆಯಲ್ಲಿರುವ ರೈತರಿಗೆ ಸಣ್ಣ ಮಟ್ಟದ ಖುಷಿಯ ಸುದ್ದಿಯಿದೆ.

ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದಲ್ಲಿ ಬಂದ ಪ್ರವಾಹ ಹಾಗೂ ಭೂಕುಸಿತದಿಂದಾಗಿ, ಅಲ್ಲಿನ ರೈತರಿಗೆ ಕೇಂದ್ರ ಸರ್ಕಾರ ಮುಂಚಿತವಾಗಿ ಪಾವತಿಯನ್ನು ಮಾಡಿದೆ. ಅಕ್ಟೋಬರ್ 7ರಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ₹171 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿ, 8.55 ಲಕ್ಷ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಿದ್ದಾರೆ. ಇದರಲ್ಲಿ 85,000ಕ್ಕೂ ಹೆಚ್ಚು ಮಹಿಳಾ ರೈತರು ಸೇರಿದ್ದಾರೆ.

ಇದರಿಂದ ಜಮ್ಮು ಕಾಶ್ಮೀರದ ರೈತರಿಗೆ ಒಟ್ಟು ₹4,052 ಕೋಟಿ ರೂ. ಪಿಎಂ ಕಿಸಾನ್ ಸಹಾಯ ದೊರೆತಿದೆ. ಇನ್ನುಳಿದ ರಾಜ್ಯಗಳ ರೈತರು 21ನೇ ಹಂತದ ಹಣಕ್ಕಾಗಿ ಕಾದಿದ್ದಾರೆ. ಸರ್ಕಾರದಿಂದ ಅಧಿಕೃತ ದಿನಾಂಕ ಪ್ರಕಟವಾಗದಿದ್ದರೂ, ದೀಪಾವಳಿಗೆ ಮುಂಚೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಮೊತ್ತ ಬರಬಹುದೆಂಬ ನಿರೀಕ್ಷೆ ಇದೆ.

ಈ ಯೋಜನೆಯಡಿ ಹಣ ಪಡೆಯಲು ಕೆಲವು ಅಂಶಗಳು ಮುಖ್ಯ:

ರೈತನು ಭಾರತೀಯ ನಾಗರಿಕನಾಗಿರಬೇಕು, ತನ್ನ ಹೆಸರಿನ ಕೃಷಿ ಭೂಮಿ ಇರಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಅರ್ಹತೆ ಇದೆ. ಆದಾಯ ತೆರಿಗೆ ಪಾವತಿಸುವವರು, ತಿಂಗಳಿಗೆ ₹10,000ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವವರು ಅಥವಾ ಸಂಸ್ಥೆಯ ಹೆಸರಿನ ಭೂಮಿ ಹೊಂದಿರುವವರು ಅರ್ಹರಲ್ಲ.

ಹಣ ಪಡೆಯಲು ಈ-ಕೇವೈಸಿ (E-KYC) ಕಡ್ಡಾಯವಾಗಿದೆ. ಇದನ್ನು ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ OTP ಅಥವಾ ಹತ್ತಿರದ CSC ಸೆಂಟರ್‌ನಲ್ಲಿ ಬಯೋಮೆಟ್ರಿಕ್ ಮೂಲಕ ಪೂರ್ಣಗೊಳಿಸಬಹುದು. ಹಣ ಜಮೆಯಾಗಿದೆ ಅಥವಾ ಇಲ್ಲವೆಂದು ತಿಳಿದುಕೊಳ್ಳಲು https://pmkisan.gov.in ವೆಬ್‌ಸೈಟ್‌ನಲ್ಲಿ “Know Your Status” ವಿಭಾಗದಲ್ಲಿ ರಿಜಿಸ್ಟ್ರೇಶನ್ ಸಂಖ್ಯೆ ನಮೂದಿಸಬೇಕು.

ಹಾಗೇ ನಿಮ್ಮ ಹೆಸರು Beneficiary List ನಲ್ಲಿ ಇದೆ ಎಂಬುದನ್ನು ತಿಳಿಯಲು ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಆಯ್ಕೆಮಾಡಿ ವರದಿ ಪಡೆಯಬಹುದು.

ಯಾವುದೇ ಸಮಸ್ಯೆ ಎದುರಾದರೆ 155261 ಅಥವಾ 011-24300606 ಸಂಖ್ಯೆಗೆ ಕರೆ ಮಾಡಬಹುದು. ಹೊಸದಾಗಿ ಅರ್ಜಿ ಸಲ್ಲಿಸದವರು “New Farmer Registration” ಟ್ಯಾಬ್ ಮೂಲಕ ಆಧಾರ್ ಸಂಖ್ಯೆ ನೀಡಿ ನೋಂದಣಿ ಮಾಡಬಹುದು.

PM Kisan 21st Installment Update, When Will Farmers Get the Money

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories