ಪಿಎಂ ಕಿಸಾನ್ 22ನೇ ಕಂತು ಬಿಡುಗಡೆ ಮುನ್ನವೇ ಲಕ್ಷಾಂತರ ರೈತರ ಹೆಸರುಗಳು ಡಿಲೀಟ್
ಪಿಎಂ ಕಿಸಾನ್ 22ನೇ ಕಂತು ಬಿಡುಗಡೆಯಾಗುವ ಮುನ್ನವೇ ದೇಶಾದ್ಯಂತ ಲಕ್ಷಾಂತರ ರೈತರ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅರ್ಹತೆ ಪರಿಶೀಲನೆ ಪ್ರಕ್ರಿಯೆ ಕಠಿಣಗೊಂಡಿದ್ದು ಆತಂಕ ಹೆಚ್ಚಾಗಿದೆ.

PM Kisan: ದೇಶಾದ್ಯಂತ ರೈತರು ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವಾಗಲೇ ಮಹತ್ವದ ಬೆಳವಣಿಗೆ ನಡೆದಿದೆ. ಕೇಂದ್ರ ಸರ್ಕಾರ ಹಲವು ರಾಜ್ಯಗಳಲ್ಲಿ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲನೆ ಮಾಡಿ, ಅರ್ಹತೆಯಿಲ್ಲದವರ ಹೆಸರನ್ನು ತೆಗೆದುಹಾಕಿದೆ. ಈ ಕ್ರಮದಿಂದ ಹಲವಾರು ರೈತರಲ್ಲಿ ಆತಂಕ ಮೂಡಿದೆ.
ಅಧಿಕಾರಿಗಳ ಪ್ರಕಾರ, ಯೋಜನೆಯ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಕಾಲಾನುಗುಣವಾಗಿ ಡೇಟಾ ಅಪ್ಡೇಟ್ ಮಾಡಲಾಗುತ್ತದೆ. ಪರಿಶೀಲನೆ ವೇಳೆ ಅನೇಕ ಅಸಂಗತತೆಗಳು ಪತ್ತೆಯಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಹೆಸರುಗಳನ್ನು ತೆಗೆದುಹಾಕಲು ಕಾರಣವೇನು?
ಭೂಮಿಯ ಮಾಲೀಕತ್ವದ ದಾಖಲೆಗಳಲ್ಲಿ ಗೊಂದಲ ಪ್ರಮುಖ ಕಾರಣವಾಗಿದೆ. 2019ರ ಫೆಬ್ರವರಿ 1ರ ನಂತರ ಭೂಮಿ ನೋಂದಾಯಿಸಿಕೊಂಡಿದ್ದರೂ, ಹಿಂದಿನ ದಾಖಲೆಗಳ ಆಧಾರದಲ್ಲಿ ಯೋಜನೆಯ ಹಣ ಪಡೆಯುತ್ತಿದ್ದ ಪ್ರಕರಣಗಳು ಕಂಡುಬಂದಿವೆ. ಇಂತಹ ಪ್ರಕರಣಗಳನ್ನು ಗುರುತಿಸಿ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಇದಲ್ಲದೆ, ಒಂದೇ ಕುಟುಂಬದ ಇಬ್ಬರು ಅಥವಾ ಹೆಚ್ಚು ಮಂದಿ ಯೋಜನೆಯ ಲಾಭ ಪಡೆಯುತ್ತಿದ್ದ ಪ್ರಕರಣಗಳೂ ಬಹಿರಂಗಗೊಂಡಿವೆ. ನಿಯಮಗಳ ಪ್ರಕಾರ, ಒಂದು ಕುಟುಂಬಕ್ಕೆ ಒಬ್ಬ ರೈತನೇ ಅರ್ಹ. ಪತಿ-ಪತ್ನಿ ಅಥವಾ ಹಿರಿಯ-ಅಪ್ರಾಪ್ತರು ಒಟ್ಟಿಗೆ ಹಣ ಪಡೆದಿದ್ದರೆ ಅದು ನಿಯಮಬಾಹಿರವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಸ್ಥಗಿತಗೊಂಡ ಹಣ ಮರಳುತ್ತದೆಯೇ?
ಅನುವಮಾನಾಸ್ಪದ ಪ್ರಕರಣಗಳಲ್ಲಿ ಹಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ. ಭೌತಿಕ ಪರಿಶೀಲನೆ ಪೂರ್ಣಗೊಂಡ ನಂತರ ರೈತರು ಅರ್ಹರಾಗಿದ್ದಾರೆಂದು ದೃಢಪಟ್ಟರೆ, ಬಾಕಿ ಉಳಿದ ಕಂತುಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಕೃಷಿ ಸಚಿವಾಲಯದ ವೆಬ್ಸೈಟ್ ಈ ಕುರಿತು ಸ್ಪಷ್ಟನೆ ನೀಡಿದೆ.
ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ? ಹೀಗೆ ಪರಿಶೀಲಿಸಿ
22ನೇ ಕಂತು ಬಿಡುಗಡೆಗೊಳ್ಳುವ ಮುನ್ನ ನಿಮ್ಮ ಸ್ಥಿತಿಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ. ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ಗೆ ಭೇಟಿ ನೀಡಿ. “Farmer Corner” ವಿಭಾಗದಲ್ಲಿ “Beneficiary Status” ಆಯ್ಕೆ ಮಾಡಿ. ನಂತರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಕ್ಯಾಪ್ಚಾ ದಾಖಲಿಸಿ “Get Data” ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ಪರದೆಯಲ್ಲಿ ಕಾಣಿಸುತ್ತದೆ.
22ನೇ ಕಂತು ಯಾವಾಗ?
22ನೇ ಕಂತಿನ ₹2,000 ಬಿಡುಗಡೆ ದಿನಾಂಕ ಕುರಿತು ಸರ್ಕಾರ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ ಮಾರ್ಚ್ ಮೊದಲ ವಾರದಲ್ಲಿ ಅಥವಾ ಹೋಳಿ ಹಬ್ಬಕ್ಕೂ ಮುನ್ನ ಹಣ ವರ್ಗಾವಣೆ ಸಾಧ್ಯತೆ ಇದೆ.






