ರಾಮಾಯಣ ಸಿನಿಮಾ ಬಳಿಕ ಹೆಚ್ಚಿದ ಬೇಡಿಕೆ; ಜಟಾಯು ಅರ್ಥ್ ಸೆಂಟರ್ಗೆ ಮೋದಿ ಭೇಟಿ ಸಾಧ್ಯತೆ
Jatayu Earth's Center: ರಾಮಾಯಣ ಸಿನಿಮಾದಲ್ಲಿನ ಜಟಾಯು ಹೋರಾಟದ ದೃಶ್ಯದಿಂದ ಕೇರಳದ ಪ್ರಸಿದ್ಧ ಪ್ರವಾಸಿ ತಾಣ ಮತ್ತೆ ಸುದ್ದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಟಾಯು ಅರ್ಥ್ ಸೆಂಟರ್ಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ.

- ಜಟಾಯು ಅರ್ಥ್ ಸೆಂಟರ್ಗೆ ಮೋದಿ ಭೇಟಿ ಸಾಧ್ಯತೆ
- ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮೊದಲ ಭೇಟಿ
- ರಾಮಾಯಣ ಸಿನಿಮಾ ಬಳಿಕ ಪ್ರವಾಸಿಗರ ಆಸಕ್ತಿ ಹೆಚ್ಚಳ
ತಿರುವನಂತಪುರಂ: ಬೆಳ್ಳಿತೆರೆಯಲ್ಲಿ ರಾಮಾಯಣದ ಜಟಾಯು ಪಾತ್ರದ ಹೋರಾಟದ ದೃಶ್ಯಗಳು ಗಮನ ಸೆಳೆದ ಬೆನ್ನಲ್ಲೇ ಕೇರಳದ ಪ್ರಸಿದ್ಧ ಜಟಾಯು ಅರ್ಥ್ ಸೆಂಟರ್ (Jatayu Earth’s Center) ಮತ್ತೊಮ್ಮೆ ಸುದ್ದಿಯಲ್ಲಿದೆ. ಕೊಲ್ಲಂ ಜಿಲ್ಲೆಯ ಚಡಯಮಂಗಲಂ ಬೆಟ್ಟದಲ್ಲಿರುವ ಈ ಪ್ರವಾಸಿ ತಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಕುರಿತು ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ (Suresh Gopi) ಮಾಹಿತಿ ನೀಡಿದ್ದಾರೆ. ಮೊದಲು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಜಟಾಯು ಅರ್ಥ್ ಸೆಂಟರ್ಗೆ ಭೇಟಿ ನೀಡಲಿದ್ದಾರೆ. ನಂತರ ಪ್ರಧಾನಿ ಮೋದಿ ಕೂಡ ಈ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಶೇಖಾವತ್ ಅವರು ಈ ಬೃಹತ್ ಶಿಲ್ಪದ ನಿರ್ಮಾತೃ ರಾಜೀವ್ ಅಂಚಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಜಟಾಯು ಶಿಲ್ಪದ ಮಹತ್ವವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ದೆಹಲಿಯಲ್ಲಿ ನಡೆಯಲಿರುವ ಬೈನಾಲೆ (Delhi Biennale) ಕಲಾ ಪ್ರದರ್ಶನದಲ್ಲಿ ಇದರ ಪ್ರತಿಕೃತಿಯನ್ನು ಪ್ರದರ್ಶಿಸುವ ಪ್ರಸ್ತಾಪವೂ ಚರ್ಚೆಯಾಗಿದೆ. ಈ ವಿಚಾರವನ್ನು ಪ್ರಧಾನಿ ಗಮನಕ್ಕೂ ತರಲಾಗಿದೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ.
ರಾವಣನ ವಿರುದ್ಧ ಹೋರಾಡಿದ ಜಟಾಯುವಿನ ಕಥೆ
ಚಡಯಮಂಗಲಂ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಬೃಹತ್ ಜಟಾಯು ಶಿಲ್ಪ ಕೇವಲ ಕಲಾಕೃತಿಯಲ್ಲ. ರಾಮಾಯಣದ ಪ್ರಮುಖ ಘಟನೆಯೊಂದನ್ನು ಕಣ್ಣಮುಂದೆ ತರುವ ಪ್ರಯತ್ನವೂ ಹೌದು. ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುತ್ತಿದ್ದಾಗ ಜಟಾಯು ಆತನನ್ನು ತಡೆಯಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ರಾವಣನೊಂದಿಗೆ ಹೋರಾಡಿ ತನ್ನ ರೆಕ್ಕೆಗಳನ್ನು ಕಳೆದುಕೊಂಡು ನೆಲಕ್ಕೆ ಬೀಳುತ್ತಾನೆ ಎಂಬ ಪೌರಾಣಿಕ ಪ್ರಸಂಗವನ್ನು ಈ ಶಿಲ್ಪ ಪ್ರತಿಬಿಂಬಿಸುತ್ತದೆ.
ಇತ್ತೀಚಿನ ‘ರಾಮಾಯಣ’ ಸಿನಿಮಾ (Ramayana Movie)ಯಲ್ಲಿ ಜಟಾಯು ಮತ್ತು ರಾವಣನ ನಡುವಿನ ಕಾಳಗದ ದೃಶ್ಯಗಳು ಮೂಡಿಬಂದಿರುವುದು ಈ ಪ್ರವಾಸಿ ತಾಣದ ಮೇಲಿನ ಆಸಕ್ತಿಯನ್ನು ಹೆಚ್ಚಿಸಿದೆ. ಸಿನಿಮಾದಲ್ಲಿ ಕಂಡ ಕಥೆಯ ಹಿನ್ನೆಲೆಯನ್ನು ನೇರವಾಗಿ ನೋಡಲು ಬಯಸುವವರ ಗಮನ ಈಗ ಕೇರಳದ ಈ ಬೆಟ್ಟದತ್ತ ಹರಿದಿದೆ.
ರಾಜೀವ್ ಅಂಚಲ್ ಕಲ್ಪನೆಯಲ್ಲಿ ಅರಳಿದ ಪ್ರವಾಸಿ ತಾಣ
ಜಟಾಯು ಅರ್ಥ್ ಸೆಂಟರ್ ನಿರ್ಮಾಣದ ಹಿಂದೆ ಶಿಲ್ಪಿ ಹಾಗೂ ಚಿತ್ರನಿರ್ಮಾಪಕ ರಾಜೀವ್ ಅಂಚಲ್ (Rajiv Anchal) ಅವರ ಪರಿಶ್ರಮವಿದೆ. 2004ರಲ್ಲಿ ಅನುಮೋದನೆ ಪಡೆದ ಈ ಪರಿಸರ ಪ್ರವಾಸೋದ್ಯಮ ಯೋಜನೆಯನ್ನು ಅವರೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ.
ಇಂದು ಈ ಸ್ಥಳ ಕೇರಳದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಿನಿಮಾ ಮೂಲಕ ಪೌರಾಣಿಕ ಕಥೆಗೆ ಹೊಸ ಚರ್ಚೆ ಸಿಕ್ಕಿರುವುದರಿಂದ, ಜಟಾಯು ಶಿಲ್ಪವನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಪರಿಚಯಿಸುವ ಪ್ರಯತ್ನಗಳಿಗೂ ವೇಗ ಸಿಗುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಭೇಟಿ ನೀಡುವ ಕುರಿತು ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.




