ಗಂಡು ಮಗು ಹುಟ್ಟುತ್ತೆ ಅಂದಿದ್ದ ಜ್ಯೋತಿಷಿ, ಹೆಣ್ಣು ಮಗು ಹುಟ್ಟಿದ್ದಕ್ಕೆ ಕೊಲೆ ಮಾಡಿದ್ರು
ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ಗಂಡು ಮಗು ಜನಿಸುತ್ತದೆ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿಯನ್ನು ಹೆಣ್ಣು ಮಗು ಜನಿಸಿದ ಬಳಿಕ ತಂದೆ-ಮಗ ಸೇರಿ ಗುಂಡಿಕ್ಕಿ ಕೊಂದಿದ್ದಾರೆ

ಉತ್ತರ ಪ್ರದೇಶದ ಮುಜಫರ್ನಗರ ಜಿಲ್ಲೆಯಲ್ಲಿ ಆಘಾತಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಗಂಡು ಮಗು ಜನಿಸುತ್ತದೆ ಎಂದು ಭವಿಷ್ಯ ನುಡಿದಿದ್ದ ದೇವಸ್ಥಾನದ ಅರ್ಚಕನ ಮಾತು ನಿಜವಾಗದ ಹಿನ್ನೆಲೆಯಲ್ಲಿ ತಂದೆ ಮತ್ತು ಮಗ ಸೇರಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ಟೋಬರ್ 13ರ ರಾತ್ರಿ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಶಿವನ ದೇವಸ್ಥಾನಕ್ಕೆ ಆಗಮಿಸಿ, 81 ವರ್ಷದ ಅರ್ಚಕ ಸ್ವಾಮಿ ದೇವಾನಂದ ಭಾರತಿಯವರ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಗೆ ಅರ್ಚಕರು ಮೃತಪಟ್ಟಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗುವ ಮುನ್ನ ಮತ್ತೊಬ್ಬ ವ್ಯಕ್ತಿಯನ್ನು ಪ್ರಕರಣದಲ್ಲಿ ಸಿಲುಕಿಸಲು ಆತನ ಫೋಟೋವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ರಸ್ತೆ ಗುಂಡಿಗೆ ಬಿದ್ದ ಕಾರು ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕಿ; ಪುಟ್ಟ ಮಗು ಸೇರಿ ಐವರ ಸಾವು
ಗಂಡು ಮಗು ಜನಿಸುವುದಾಗಿ ಭವಿಷ್ಯ ನುಡಿದಿದ್ದ ಅರ್ಚಕ
ಪೊಲೀಸರ ತನಿಖೆಯ ಪ್ರಕಾರ, ಜೀಶಾನ್ನ ಪತ್ನಿ ಗರ್ಭಿಣಿಯಾಗಿದ್ದಾಗ ದಂಪತಿಗೆ ಗಂಡು ಮಗು ಜನಿಸುತ್ತದೆ ಎಂದು ಅರ್ಚಕ ಸ್ವಾಮಿ ದೇವಾನಂದ ಭಾರತಿ ಭವಿಷ್ಯ ನುಡಿದಿದ್ದರು. ಆದರೆ ಸುಮಾರು ಒಂದೂವರೆ ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದಾದ ಬಳಿಕ ಅರ್ಚಕ ಮತ್ತು ತಂದೆ-ಮಗನ ನಡುವೆ ವಿವಾದ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿವಾದವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಹಾಶಿಮ್ ಮತ್ತು ಆತನ ಮಗ ಜೀಶಾನ್ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ದೇವಸ್ಥಾನಕ್ಕೆ ತೆರಳುತ್ತಿದ್ದ 12 ಮಂದಿ ಸಾವು, 39 ಜನರಿಗೆ ಗಾಯ
ಮತ್ತೊಬ್ಬನನ್ನು ಸಿಲುಕಿಸಲು ಸಂಚು?
ಗ್ರಾಮದ ಹರೇಂದ್ರ ಎಂಬ ವ್ಯಕ್ತಿಯೊಂದಿಗೆ ಆರೋಪಿಗಳಿಗೆ ಮೊದಲಿನಿಂದಲೂ ವಿವಾದವಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಚಕನ ಕೊಲೆ ಪ್ರಕರಣದಲ್ಲಿ ಹರೇಂದ್ರನನ್ನು ಸಿಲುಕಿಸುವ ಉದ್ದೇಶದಿಂದ ಆತನ ಫೋಟೋವನ್ನು ಅಪರಾಧ ನಡೆದ ಸ್ಥಳದಲ್ಲಿ ಬಿಟ್ಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ದೇವಸ್ಥಾನಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಸ್ಥಳದಲ್ಲಿ ಸಿಕ್ಕ ಫೋಟೋ ಸೇರಿದಂತೆ ಹಲವು ಸುಳಿವುಗಳನ್ನು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೃತ್ಯಕ್ಕೆ ಬಳಸಿದ ಬೈಕ್, ಎರಡು ನಾಡಬಂದೂಕುಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



