ರೈಲು ಟಿಕೆಟ್ ದರ ಏರಿಕೆ ಇಂದಿನಿಂದಲೇ ಜಾರಿಗೆ! ರೈಲು ಪ್ರಯಾಣಕ್ಕೆ ಹೆಚ್ಚುವರಿ ಭಾರ
ರೈಲ್ವೇ ಇಲಾಖೆ ಈ ವಾರ ಘೋಷಿಸಿದ್ದ ಟಿಕೆಟ್ ದರ ಏರಿಕೆ ಇಂದಿನಿಂದಲೇ ಜಾರಿಗೆ ಬಂದಿದ್ದು, ದೀರ್ಘ ದೂರ ಪ್ರಯಾಣಿಸುವ ಪ್ರಯಾಣಿಕರ ಖರ್ಚು ಸ್ವಲ್ಪ ಹೆಚ್ಚಾಗಲಿದೆ ಎಂದು ಅಧಿಕೃತವಾಗಿ ತಿಳಿಸಿದೆ
Image Source: Ai Generated
- ರೈಲು ಟಿಕೆಟ್ ದರ ಏರಿಕೆ: ಇಂದಿನಿಂದ ಹೊಸ ದರಗಳು ಜಾರಿ
- 216 ಕಿಮೀ ಮೀರಿದ ಪ್ರಯಾಣಕ್ಕೆ ಹೆಚ್ಚುವರಿ ಶುಲ್ಕ
- ವಂದೇ ಭಾರತ್, ಶತಾಬ್ದಿ ಸೇರಿ ಎಲ್ಲಾ ಎಕ್ಸ್‌ಪ್ರೆಸ್‌ಗಳಿಗೆ ಹೆಚ್ಚಳ
Railway Ticket Fare Hike: ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ. ಈ ವಾರ ಆರಂಭದಲ್ಲಿ ಘೋಷಿಸಿದ್ದ ರೈಲು ಟಿಕೆಟ್ ದರ ಏರಿಕೆ ಇಂದಿನಿಂದ ಜಾರಿಗೆ ಬಂದಿದೆ. ಹೊಸ ದರಗಳು ಇಂದಿನಿಂದ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತವೆ. ಡಿಸೆಂಬರ್ 26ರ ಒಳಗೆ ಟಿಕೆಟ್ ಕಾಯ್ದುಕೊಂಡವರಿಗೆ ಹಳೆಯ ದರಗಳೇ ಅನ್ವಯವಾಗುತ್ತವೆ.
ಜನರಲ್ ಕ್ಲಾಸ್ ಟಿಕೆಟ್‌ಗೆ ದೂರದ ಆಧಾರದ ಮೇಲೆ ಬದಲಾವಣೆ
215 ಕಿಲೋಮೀಟರ್‌ವರೆಗೆ ಪ್ರಯಾಣಿಸುವ ಜನರಲ್ ಕ್ಲಾಸ್ ಪ್ರಯಾಣಿಕರಿಗೆ ಯಾವುದೇ ದರ ಬದಲಾವಣೆ ಇಲ್ಲ. ಆದರೆ 216 ಕಿಮೀದಿಂದ 750 ಕಿಮೀ ನಡುವಿನ ಪ್ರಯಾಣಕ್ಕೆ ಹೆಚ್ಚುವರಿ ₹5, 751 ರಿಂದ 1,250 ಕಿಮೀ ವರೆಗೆ ₹10, 1,251 ರಿಂದ 1,750 ಕಿಮೀಗೆ ₹15 ಮತ್ತು 1,751 ರಿಂದ 2,250 ಕಿಮೀ ವರೆಗೆ ಪ್ರಯಾಣಿಸುವವರಿಗೆ ₹20 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಸ್ಲೀಪರ್, ಏಸಿ ಮತ್ತು ಪ್ರೀಮಿಯಂ ರೈಲುಗಳ ದರ ಏರಿಕೆ
ಸ್ಲೀಪರ್ ಮತ್ತು ಫಸ್ಟ್ ಕ್ಲಾಸ್ ಟಿಕೆಟ್‌ಗಳ ದರವನ್ನು ಪ್ರತಿ ಕಿಲೋಮೀಟರ್‌ಗೆ ಒಂದು ಪೈಸೆ ಹೆಚ್ಚಿಸಲಾಗಿದೆ. ಮೆಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸ್ಲೀಪರ್, ಏಸಿ ಚೇರ್ ಕಾರ್, ಏಸಿ ತ್ರೀ-ಟಿಯರ್, ಟೂ-ಟಿಯರ್, ಫಸ್ಟ್ ಕ್ಲಾಸ್‌ಗಳಿಗೆ ಕಿಲೋಮೀಟರ್‌ಗೆ ಎರಡು ಪೈಸೆ ಹೆಚ್ಚಳ ಜಾರಿಯಾಗಿದೆ.
ರಾಜಧಾನಿ, ಶತಾಬ್ದಿ ಮತ್ತು ವಂದೇ ಭಾರತ ಸೇರಿದಂತೆ ಎಲ್ಲಾ ಪ್ರೀಮಿಯಂ ರೈಲುಗಳಿಗೂ ಈ ಹೆಚ್ಚಳ ಅನ್ವಯವಾಗುತ್ತದೆ.
ರೈಲ್ವೆಗೆ ಹೆಚ್ಚುವರಿ ಆದಾಯ ನಿರೀಕ್ಷೆ
ಈ ದರ ಏರಿಕೆಯಿಂದ ವರ್ಷಕ್ಕೆ ಸುಮಾರು ₹600 ಕೋಟಿ ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆ ಇದೆ. ಸಬರ್ಬನ್ ರೈಲುಗಳ ಟಿಕೆಟ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ವರ್ಷದೊಳಗೆ ಇದು ಎರಡನೇ ಬಾರಿ ಟಿಕೆಟ್ ದರ ಹೆಚ್ಚಳವಾಗಿದ್ದು, ಪ್ರಯಾಣಿಕರಲ್ಲಿ ಚರ್ಚೆಗೆ ಕಾರಣವಾಗಿದೆ.







