ಮಹಿಳೆಗೆ ‘ಐ ಲವ್ ಯು’ ಮೆಸೇಜ್ ಕಳುಹಿಸಿದ ರ‍್ಯಾಪಿಡೋ ರೈಡರ್‌! ಆಮೇಲೆ ಏನಾಯ್ತು ಗೊತ್ತಾ?

ನೋಯ್ಡಾದ ಮಹಿಳೆಗೆ ರ‍್ಯಾಪಿಡೋ ಡೆಲಿವರಿ ಸಿಬ್ಬಂದಿ ‘ಐ ಲವ್ ಯು’ ಸಂದೇಶ ಕಳುಹಿಸಿದ ಆರೋಪ ಕೇಳಿಬಂದಿದ್ದು, ದೂರು ನೀಡುವುದಾಗಿ ಎಚ್ಚರಿಸಿದರೂ, ದೂರು ಕೊಡಿ ಎಂದು ಸವಾಲು ಹಾಕಿದ್ದಾನೆ.

ನೋಯ್ಡಾದ ಮಹಿಳೆಯೊಬ್ಬರಿಗೆ ರ‍್ಯಾಪಿಡೋ ಡೆಲಿವರಿ ಸಿಬ್ಬಂದಿ (Rapido Rider) ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ ಆರೋಪ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಆರಂಭದಲ್ಲಿ ಮಹಿಳೆಯ ಆರೋಗ್ಯ ವಿಚಾರಿಸಿದ ವ್ಯಕ್ತಿ, ಬಳಿಕ ನೇರವಾಗಿ ‘ಐ ಲವ್ ಯು’ (I Love You Text Message to Woman) ಎಂದು ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಮಹಿಳೆ, ಮತ್ತೆ ಕರೆ ಅಥವಾ ಮೆಸೇಜ್ ಮಾಡಿದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.

ಆದರೆ ಮಹಿಳೆಯ ಎಚ್ಚರಿಕೆಗೆ ಆ ವ್ಯಕ್ತಿ, ‘ಹಾಗಾದರೆ ದೂರು ಕೊಡಿ’ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು (Screenshots) ನೋಯ್ಡಾ ನಿವಾಸಿ ಗೀತಿಕಾ ಶ್ರೀವಾಸ್ತವ (Geetika Srivastava) ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆಯಿಂದ ಗ್ರಾಹಕರ ಖಾಸಗಿತನ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ತಮ್ಮ ವೈಯಕ್ತಿಕ ಸಂಪರ್ಕ ಮಾಹಿತಿ ಡೆಲಿವರಿ ಸಿಬ್ಬಂದಿಗೆ ಹೇಗೆ ಸಿಕ್ಕಿತು ಎಂಬುದೇ ಗೀತಿಕಾ ಅವರ ಪ್ರಮುಖ ಪ್ರಶ್ನೆಯಾಗಿದೆ. ಪಾರ್ಸೆಲ್ ಡೆಲಿವರಿ ಸೇವೆ ಬಳಸುವಾಗ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರುತ್ತದೆ ಎಂದು ನಂಬುತ್ತಾರೆ. ಆದರೆ ಸಿಬ್ಬಂದಿಯೊಬ್ಬರು ಅದನ್ನು ವೈಯಕ್ತಿಕವಾಗಿ ಸಂಪರ್ಕಿಸಲು ಬಳಸಿದರೆ, ಇದು ಗ್ರಾಹಕರ ಗೌಪ್ಯತೆ (Privacy) ಮತ್ತು ವೃತ್ತಿಪರ ಮಿತಿಗಳ ಕುರಿತು ಆತಂಕ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಗೀತಿಕಾ ಹಂಚಿಕೊಂಡ ಪೋಸ್ಟ್ ವೈರಲ್ ಆದ ಬಳಿಕ ಈ ವಿಚಾರ ರ‍್ಯಾಪಿಡೋ ಸಂಸ್ಥೆಯ ಗಮನಕ್ಕೂ ಬಂದಿದೆ. ಘಟನೆಗೆ ಪ್ರತಿಕ್ರಿಯಿಸಿರುವ ಕಂಪನಿ, ಮಹಿಳೆಗೆ ಕ್ಷಮೆಯಾಚಿಸಿದೆ. ಡೆಲಿವರಿ ಸಿಬ್ಬಂದಿಯ ವರ್ತನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದು, ಗ್ರಾಹಕರ ಸುರಕ್ಷತೆ, ಗೌರವ ಮತ್ತು ವೃತ್ತಿಪರ ನಡವಳಿಕೆಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಸ್ಪಷ್ಟಪಡಿಸಿದೆ.

ಈ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲೂ ಹಲವು ಮಂದಿ ಪ್ರತಿಕ್ರಿಯಿಸುತ್ತಿದ್ದು, ಡೆಲಿವರಿ ಸಿಬ್ಬಂದಿಗೆ ಗ್ರಾಹಕರ ಸಂಪರ್ಕ ಮಾಹಿತಿ ಯಾವ ರೀತಿಯಲ್ಲಿ ಲಭ್ಯವಾಗುತ್ತದೆ ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮಹಿಳೆಯ ಅನುಭವದ ಬಳಿಕ ಇಂತಹ ಘಟನೆಗಳು ಮರುಕಳಿಸದಂತೆ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories