Delhi News: ಮನೆ ಬಿಟ್ಟು ಹೋಗಿದ್ದ 14 ವರ್ಷದ ಬಾಲಕಿ, ಊಟ-ತಿಂಡಿ ಇಲ್ಲದೆ ಸಾವು! ಘೋರವಾಗಿದೆ ಈ ಸ್ಟೋರಿ
ಮನೆ ಬಿಟ್ಟು ಹೋಗಿದ್ದ 14 ವರ್ಷದ ಬಾಲಕಿ ರಸ್ತೆಯಲ್ಲೇ ಬದುಕು ಸಾಗಿಸಿ, ಕೊನೆಗೆ ಮದುವೆಗೆ ಮಾರಾಟವಾಗಿ, ತೀವ್ರ ಪೋಷಕಾಂಶ ಕೊರತೆ ಅನುಭವಿಸಿ ದೆಹಲಿಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ

Delhi News: ಮನೆ ಬಿಟ್ಟು ಹೋಗುವ ಮಕ್ಕಳ ಭದ್ರತೆ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತುವ ಘಟನೆ ದೇಶ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಕುಟುಂಬದ ಜಗಳದಿಂದ ಮನೆಯಿಂದ ಓಡಿಹೋದ ಬಾಲಕಿಯ ಬದುಕು ದುರಂತದಲ್ಲಿ ಅಂತ್ಯಗೊಂಡಿದೆ.
ದೆಹಲಿಯ ದಯಾಲ್‌ಪುರ ಪ್ರದೇಶದ 14 ವರ್ಷದ ಬಾಲಕಿ ಕಳೆದ ವರ್ಷ ಕುಟುಂಬದ ಸದಸ್ಯರೊಂದಿಗೆ ನಡೆದ ಗಲಾಟೆಯ ಬಳಿಕ ಮನೆ ಬಿಟ್ಟು ಹೋಗಿದ್ದಳು. ಆಕೆಯ ಬಗ್ಗೆ ಕುಟುಂಬದವರು ಹೆಚ್ಚು ಗಮನ ಹರಿಸಿಲ್ಲ. ಪೊಲೀಸರಿಗೆ ನಾಪತ್ತೆ ಪ್ರಕರಣ ದಾಖಲಿಸುವ ಪ್ರಯತ್ನವೂ ನಡೆದಿರಲಿಲ್ಲ.
ರಸ್ತೆ ಬದುಕಿನಿಂದ ಮದುವೆಗೆ ಮಾರಾಟ
ಮನೆಯಿಂದ ಹೊರಬಂದ ನಂತರ ಬಾಲಕಿ ಕೆಲಕಾಲ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ರಸ್ತೆ ಬದಿಯಲ್ಲಿ ಬದುಕು ಸಾಗಿಸಿದ್ದಾಳೆ. ಈ ಸಂದರ್ಭದಲ್ಲಿ ಮಧ್ಯವರ್ತಿಯೊಬ್ಬ ಆಕೆಯನ್ನು ರಾಜಸ್ಥಾನದ ವ್ಯಕ್ತಿಗೆ ಮದುವೆ ಹೆಸರಿನಲ್ಲಿ ಮಾರಾಟ ಮಾಡಿದ್ದಾನೆ. ಬಲವಂತದ ಮದುವೆ ಬಳಿಕ ಅಲ್ಲಿಂದ ತಪ್ಪಿಸಿಕೊಂಡ ಬಾಲಕಿ ಹರಿಯಾಣಕ್ಕೆ ತಲುಪಿದ್ದಾಳೆ.
ಅಕ್ಟೋಬರ್ 24ರಂದು ಹರಿಯಾಣದ ಪಾನಿಪಟ್‌ನಲ್ಲಿ ತೀವ್ರ ಅಸ್ವಸ್ಥತೆಯಲ್ಲಿದ್ದ ಬಾಲಕಿ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ತೀವ್ರ ಪೋಷಕಾಂಶ ಕೊರತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದುದನ್ನು ವೈದ್ಯರು ದೃಢಪಡಿಸಿದರು. ದೆಹಲಿಯ ಜಿಟಿಬಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ವೇಳೆ ನೀಡಿದ ಹೇಳಿಕೆಯಲ್ಲಿ, ತಾನು ಮದುವೆಗೆ ಮಾರಾಟಗೊಂಡಿದ್ದೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 12ರಂದು ಆಕೆ ಸಾವನ್ನಪ್ಪಿದ್ದಾಳೆ.
ಈ ಪ್ರಕರಣದ ಬಳಿಕ ಪೊಲೀಸರು ಬಾಲಕಿಯ ಕುಟುಂಬದ ಪಾತ್ರದ ಬಗ್ಗೆ ತನಿಖೆ ಆರಂಭಿಸಿದ್ದು, ನಿರ್ಲಕ್ಷ್ಯ, ಕ್ರೂರ ವರ್ತನೆ ಅಥವಾ ರಕ್ಷಣೆ ವಿಫಲವಾದ ಅಂಶಗಳಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಬಾಲಕಿಯ ಸಾವಿನ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.







