ಕುತ್ತಿಗೆಗೆ ತಂತಿ ಬಿಗಿದು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಸೆಕ್ಯೂರಿಟಿ ಗಾರ್ಡ್ ಅತ್ಯಾಚಾರ

ಅಹಮದಾಬಾದ್‌ನ ಪಿಜಿ ಹಾಸ್ಟೆಲ್‌ನಲ್ಲಿ ರಾತ್ರಿ ಟೆರೇಸ್‌ಗೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಭದ್ರತಾ ಸಿಬ್ಬಂದಿ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
  • ಅಹಮದಾಬಾದ್ ಪಿಜಿ ಹಾಸ್ಟೆಲ್‌ನಲ್ಲಿ ಘಟನೆ
  • ಟೆರೇಸ್‌ನಲ್ಲಿ ವಿದ್ಯಾರ್ಥಿನಿಯನ್ನು ಬೆದರಿಸಿ ಕೃತ್ಯ

ಅಹಮದಾಬಾದ್: ಪಿಜಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿ ಮೇಲೆ ಭದ್ರತಾ ಸಿಬ್ಬಂದಿಯೊಬ್ಬ ಅತ್ಯಾಚಾರ ನಡೆಸಿದ ಆರೋಪದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಆಗಸ್ಟ್ 8ರ ರಾತ್ರಿ ಊಟ ಮುಗಿಸಿದ ಬಳಿಕ ಸುಮಾರು 10 ಗಂಟೆ ವೇಳೆಗೆ ವಿದ್ಯಾರ್ಥಿನಿ ವಾಕಿಂಗ್‌ಗಾಗಿ ಹಾಸ್ಟೆಲ್ ಕಟ್ಟಡದ ಟೆರೇಸ್‌ಗೆ ತೆರಳಿದ್ದಳು. ಅಲ್ಲಿ ಭದ್ರತಾ ಸಿಬ್ಬಂದಿ ಇದ್ದುದನ್ನು ಗಮನಿಸಿದ ಆಕೆ ಕೆಳಗೆ ಬರಲು ಮುಂದಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಆರೋಪಿ ಆಕೆಯನ್ನು ತಡೆದು, ವೈರ್ ಬಳಸಿ ಬೆದರಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ. ಘಟನೆಯ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ದೂರು ಬಂದ ತಕ್ಷಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಾಸ್ಟೆಲ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಧರಮ್ ಸಿಂಗ್ ಮೇಲೆ ಅನುಮಾನ ವ್ಯಕ್ತವಾಗಿದೆ.

ಪೊಲೀಸರು ಶನಿವಾರ ರಾತ್ರಿ ಪೂರ್ತಿ ಆತನಿಗಾಗಿ ಹುಡುಕಾಟ ನಡೆಸಿದ್ದು, ಕೊನೆಗೆ ಭಾನುವಾರ ಬೆಳಗ್ಗೆ ಧರಮ್ ಸಿಂಗ್‌ನನ್ನು ಬಂಧಿಸಿದ್ದಾರೆ. ಆರೋಪಿ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ.

ಧರಮ್ ಸಿಂಗ್ ಕೆಲವೇ ದಿನಗಳ ಹಿಂದೆ ಈ ಪಿಜಿ ಹಾಸ್ಟೆಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories