ಮದುವೆಗೆ ಕೆಲವೇ ಗಂಟೆಗಳ ಮುನ್ನ ಅಕ್ಕ-ತಂಗಿಯರ ಶಂಕಾಸ್ಪದ ಸಾವು
ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಮನಾಯಿ ಗ್ರಾಮದಲ್ಲಿ ಮದುವೆ ನಿಶ್ಚಿತವಾಗಿದ್ದ ಅಕ್ಕ-ತಂಗಿಯರು ಶಂಕಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಆತ್ಮಹತ್ಯೆ ಶಂಕೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

- ಮದುವೆ ಮುನ್ನವೇ ಅಕ್ಕ-ತಂಗಿಯರ ಸಾವು
- ಜೋಧ್‌ಪುರ ಘಟನೆ, ಮನಾಯಿ ಗ್ರಾಮದಲ್ಲಿ ಶೋಕ
- ಆತ್ಮಹತ್ಯೆ ಶಂಕೆ, ವಿಷ ಸೇವನೆ ಅನುಮಾನ
Rajasthan Tragedy: ಮದುವೆ ಮಂಟಪಕ್ಕೆ ಸಜ್ಜಾಗಿದ್ದ ಮನೆ ಒಂದೇ ಕ್ಷಣದಲ್ಲಿ ಶೋಕಸಾಗರವಾಗಿರುವ ಘಟನೆ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶನಿವಾರ ಬೆಳಗ್ಗೆ ಮದುವೆ ನಡೆಯಬೇಕಿದ್ದ ಇಬ್ಬರು ಅಕ್ಕ-ತಂಗಿಯರು (Sisters Death) ಮುಂಜಾನೆ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮನಾಯಿ ಗ್ರಾಮಕ್ಕೆ ಸೇರಿದ ದೀಪ್ ಸಿಂಗ್ ಅವರ ಪುತ್ರಿಯರಾದ ಶೋಭಾ (25) ಮತ್ತು ವಿಮಲಾ (23) ಖಾಸಗಿ ಶಾಲೆಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬದವರು ಇಬ್ಬರ ಮದುವೆಯನ್ನು ಒಂದೇ ದಿನ ನಿಗದಿಪಡಿಸಿದ್ದರು. ಶುಕ್ರವಾರ ರಾತ್ರಿ ಸಂಭ್ರಮ, ಸಂಪ್ರದಾಯಗಳ ನಡುವೆ ಮದುವೆ ಸಿದ್ಧತೆಗಳು ಪೂರ್ಣಗೊಂಡಿದ್ದವು.
ಆದರೆ ಶನಿವಾರ ಬೆಳಿಗ್ಗೆ ಸುಮಾರು 4 ಗಂಟೆ ಸುಮಾರಿಗೆ ಇಬ್ಬರೂ ಏಕಾಏಕಿ ಅಸ್ವಸ್ಥರಾದರು. ಆತಂಕಗೊಂಡ ಕುಟುಂಬದವರು ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ಈ ಸುದ್ದಿ ಕೇಳಿ ಮನೆಯವರ ಅಳಲು ಮುಗಿಲು ಮುಟ್ಟಿತು.
ಪ್ರಾಥಮಿಕ ತನಿಖೆಯಲ್ಲಿ ವಿಷಪದಾರ್ಥ ಸೇವನೆ ಸಾಧ್ಯತೆ ಕುರಿತು ಅನುಮಾನ ವ್ಯಕ್ತವಾಗಿದೆ. ಇದು ಆತ್ಮಹತ್ಯೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಕುಟುಂಬದ ಒತ್ತಡ ಕಾರಣವೇ? ಅಥವಾ ಬೇರೆ ಕಾರಣಗಳಿವೆಯೇ? ಎಂಬ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






