ಇನ್ನೊಬ್ಬನೊಂದಿಗೆ ಸಿಕ್ಕಿಬಿದ್ದ ಹೆಂಡತಿ, ಮಾರಕಾಸ್ತ್ರದಿಂದ ಇಬ್ಬರನ್ನೂ ಕೊಚ್ಚಿ ಕೊಂದ ಗಂಡ
ತಮಿಳುನಾಡಿನಲ್ಲಿ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇದ್ದುದನ್ನು ಕಂಡ ಪತಿ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನಲ್ಲಿ ಕೌಟುಂಬಿಕ ಕಲಹವೊಂದು ಭೀಕರ ಹತ್ಯಾಕಾಂಡದಲ್ಲಿ ಅಂತ್ಯಗೊಂಡಿದೆ. ಪತ್ನಿಯ ಸಂಬಂಧದ ವಿಚಾರವಾಗಿ ಮನೆಯಲ್ಲಿ ಉಂಟಾಗಿದ್ದ ಅಸಮಾಧಾನ ಕೊನೆಗೆ ಎರಡು ಜೀವಗಳನ್ನು ಬಲಿ ಪಡೆದಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಈ ಘಟನೆ (Double Murder) ತಮಿಳುನಾಡಿನ (Tamil Nadu) ವಿರುದುನಗರ (Virudhunagar) ಜಿಲ್ಲೆಯ ಅರುಪ್ಪುಕೋಟೈ ಸಮೀಪದ ಪಾಳಯಂಪಟ್ಟಿ ಗ್ರಾಮದಲ್ಲಿ ನಡೆದಿದೆ. ಶರವಣಕುಮಾರ್ ಎಂಬಾತ ತನ್ನ ಪತ್ನಿ ಪೊನ್ನಳಗು ಹಾಗೂ ಆನಂದರಾಜ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಶರವಣಕುಮಾರ್ ಮತ್ತು ಪೊನ್ನಳಗು ದಂಪತಿಗೆ ಮೂವರು ಮಕ್ಕಳಿದ್ದಾರೆ. ಇದೇ ಗ್ರಾಮದ ನಿವಾಸಿಯಾಗಿದ್ದ ಆನಂದರಾಜ್ಗೆ ಇಬ್ಬರು ಪುತ್ರರಿದ್ದಾರೆ. ಪೊನ್ನಳಗು ಹಾಗೂ ಆನಂದರಾಜ್ ನಡುವೆ ಕೆಲ ಸಮಯದಿಂದ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರ ಪತಿ ಶರವಣಕುಮಾರ್ ಗಮನಕ್ಕೂ ಬಂದಿತ್ತು. ಈ ಸಂಬಂಧ ಮುಂದುವರಿಸದಂತೆ ಆತ ಪತ್ನಿಗೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ, ಇಬ್ಬರ ನಡುವಿನ ಸಂಪರ್ಕ ಮುಂದುವರಿದಿತ್ತು ಎನ್ನಲಾಗಿದೆ. ಇದೇ ವಿಚಾರದಿಂದ ಆಕ್ರೋಶಗೊಂಡಿದ್ದ ಶರವಣಕುಮಾರ್, ಪತ್ನಿ ಮತ್ತು ಆನಂದರಾಜ್ ಒಟ್ಟಿಗೆ ಏಕಾಂತದಲ್ಲಿದ್ದ ಸಮಯದಲ್ಲಿ ಅಲ್ಲಿಗೆ ಬಂದಿದ್ದಾನೆ. ಬಳಿಕ ತನ್ನೊಂದಿಗೆ ತಂದಿದ್ದ ಮಾರಕಾಸ್ತ್ರದಿಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ಕಲ್ಲಿನಿಂದಲೂ ದಾಳಿ ಮಾಡಿದ್ದು, ತೀವ್ರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಹಿತಿಗಳು ತಿಳಿಸಿವೆ.
ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಅರುಪ್ಪುಕೋಟೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಇನ್ನೊಂದೆಡೆ, ಘಟನೆ ಬಳಿಕ ಆರೋಪಿ ಶರವಣಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ಕಾರಣವಾದ ನಿಖರ ಸನ್ನಿವೇಶಗಳು ಹಾಗೂ ಘಟನೆಯ ಹಿಂದಿನ ಬೆಳವಣಿಗೆಗಳ ಕುರಿತು ತನಿಖೆ ಮುಂದುವರಿದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌತಮ್ ಗೋಯಲ್ ಕೂಡ ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಘಟನೆಯಿಂದ ಎರಡೂ ಕುಟುಂಬಗಳಲ್ಲಿ ಆಘಾತ ಮತ್ತು ದುಃಖ ಆವರಿಸಿದೆ. ಮೂವರು ಮಕ್ಕಳ ತಾಯಿ ಹಾಗೂ ಇಬ್ಬರು ಮಕ್ಕಳ ತಂದೆ ಮೃತಪಟ್ಟಿರುವುದು ಕುಟುಂಬದವರನ್ನು ಕಂಗೆಡಿಸಿದೆ. ವೈಯಕ್ತಿಕ ಸಂಬಂಧದ ವಿಚಾರದಲ್ಲಿ ನಡೆದ ಈ ಜೋಡಿ ಕೊಲೆ ಪಾಳಯಂಪಟ್ಟಿ ಗ್ರಾಮದಲ್ಲಿ ಆತಂಕ ಮೂಡಿಸಿದೆ.



