ಘಾಟ್‌ನಲ್ಲಿ ಭೀಕರ ಅಪಘಾತ: ಬೊಲೆರೊ ವಾಹನ ಪಲ್ಟಿ, ಇಬ್ಬರು ಭಕ್ತರು ಸಾವು
ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ಭಕ್ತರು ಪ್ರಯಾಣಿಸುತ್ತಿದ್ದ ಬೊಲೆರೊ ವಾಹನ ಬೆಟ್ಟಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶದ (Andhra Pradesh) ಅಲ್ಲೂರಿ ಜಿಲ್ಲೆಯಲ್ಲಿ ಭಕ್ತರು ಪ್ರಯಾಣಿಸುತ್ತಿದ್ದ ಬೊಲೆರೊ ವಾಹನ ಭೀಕರ ಅಪಘಾತಕ್ಕೀಡಾಗಿದೆ. ಪಾಡೇರು ಘಾಟ್ ರಸ್ತೆಯಲ್ಲಿ ಬೆಟ್ಟಕ್ಕೆ ಡಿಕ್ಕಿ ಹೊಡೆದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅನಕಾಪಲ್ಲಿ ಜಿಲ್ಲೆಯ ಜುತ್ತಾಡ ಪ್ರದೇಶದ ಭವಾನಿ ಭಕ್ತರು ಪಾಡೇರು ಅಮ್ಮನ ದರ್ಶನ ಪಡೆದು ವಾಪಸ್ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಾಹನದಲ್ಲಿ ಸುಮಾರು 25 ಮಂದಿ ಇದ್ದರು ಎನ್ನಲಾಗಿದೆ. ಘಾಟ್ ರಸ್ತೆಯಲ್ಲಿ ವಾಹನ ಬೆಟ್ಟಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಇದನ್ನೂ ಓದಿ: ಶಾಕಿಂಗ್! ಆಟವಾಡುವಾಗ ಬಿದ್ದ ಬಾಲಕನ ಬಾಯಿಗೆ ಚುಚ್ಚಿಕೊಂಡ ಕಬ್ಬಿಣದ ರಾಡ್
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



