ಅಮ್ಮನ ಜೊತೆ ಮಲಗಿದ್ದ ಮಕ್ಕಳಿಗೆ ಹಾವು ಕಚ್ಚಿ ಸಾವು; ತಾಯಿ ಸ್ಥಿತಿ ಗಂಭೀರ
Snakebite: ರಾತ್ರಿ ತಾಯಿಯ ಮಡಿಲಲ್ಲಿ ನೆಮ್ಮದಿಯಿಂದ ನಿದ್ರಿಸುತ್ತಿದ್ದ ಇಬ್ಬರು ಪುಟ್ಟ ಮಕ್ಕಳಿಗೆ ನಾಗರಹಾವು ಕಚ್ಚಿದೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದು, ತಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

- ತಾಯಿ ಜೊತೆ ಮಲಗಿದ್ದ ಮಕ್ಕಳಿಗೆ ಕಚ್ಚಿದ ಹಾವು
- ಚಿಕಿತ್ಸೆ ಫಲಿಸದೆ ಇಬ್ಬರು ಕಂದಮ್ಮಗಳ ಸಾವು
- ತಾಯಿಯ ಆರೋಗ್ಯ ಸ್ಥಿತಿ ಗಂಭೀರ
Snakebite: ಮನೆಯೊಳಗೆ ರಾತ್ರಿ ನೆಮ್ಮದಿಯಿಂದ ಮಲಗಿದ್ದ ಕುಟುಂಬವೊಂದಕ್ಕೆ ಬೆಳಗಾಗುವ ಮುನ್ನವೇ ಭೀಕರ ಆಘಾತ ಎದುರಾಗಿದೆ. ತಾಯಿಯೊಂದಿಗೆ ಮಲಗಿದ್ದ ಇಬ್ಬರು ಪುಟ್ಟ ಹೆಣ್ಣುಮಕ್ಕಳಿಗೆ ಹಾವು ಕಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರೂ ಮೃತಪಟ್ಟಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ತಾಯಿ ಕೂಡ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡಿನ (Tamil Nadu) ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಇಡೀ ಗ್ರಾಮವನ್ನೇ ದುಃಖದಲ್ಲಿ ಮುಳುಗಿಸಿದೆ.
ಶಂಕರಾಪುರಂ ಸಮೀಪದ ಮೂಕನೂರು ಗ್ರಾಮದ ಚಂದ್ರನ್ ಎಂಬುವವರು ಪತ್ನಿ ಪುಷ್ಪಾ ಹಾಗೂ ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದರು. ದೇವದರ್ಶಿನಿ (3) ಮತ್ತು ದೇವಜನನಿ (1) ಕುಟುಂಬದ ಪುಟ್ಟ ಮಕ್ಕಳು. ಎಂದಿನಂತೆ ರಾತ್ರಿ ಪುಷ್ಪಾ ತನ್ನ ಇಬ್ಬರು ಮಕ್ಕಳನ್ನು ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ನುಗ್ಗಿದ ನಾಗರಹಾವು (Cobra) ತಾಯಿ ಮತ್ತು ಮಕ್ಕಳಿಗೆ ಕಚ್ಚಿದೆ ಎನ್ನಲಾಗಿದೆ.
ಹಾವಿನ ಕಡಿತದ ನೋವಿನಿಂದ ಪುಷ್ಪಾ ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಅಕ್ಕಪಕ್ಕದ ನಿವಾಸಿಗಳು ಮನೆಗೆ ಧಾವಿಸಿ ಸಹಾಯಕ್ಕೆ ಮುಂದಾಗಿದ್ದಾರೆ. ತಡಮಾಡದೆ ಮೂವರನ್ನೂ 108 ಆಂಬುಲೆನ್ಸ್ ಮೂಲಕ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಾಗಲೇ ಮಕ್ಕಳ ದೇಹದಲ್ಲಿ ವಿಷದ ಪರಿಣಾಮ ಹೆಚ್ಚಾಗಿತ್ತು.
ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಇಬ್ಬರು ಪುಟ್ಟ ಬಾಲಕಿಯರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಿಸದೆ ಇಬ್ಬರೂ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮತ್ತೊಂದೆಡೆ ಪುಷ್ಪಾ ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದ್ದರಿಂದ ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಅಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಆರಂಭದಲ್ಲಿ ಮಕ್ಕಳ ಸಾವಿನ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾಗಿದ್ದವು. ಅದರಲ್ಲೂ ಹಿರಿಯ ಮಗು ದೇವದರ್ಶಿನಿಯ ದೇಹದಲ್ಲಿ ಹಾವು ಕಚ್ಚಿದ ಗುರುತುಗಳು ಸ್ಪಷ್ಟವಾಗಿ ಕಾಣಿಸದಿರುವುದು ಗೊಂದಲಕ್ಕೆ ಕಾರಣವಾಗಿತ್ತು. ಹೀಗಾಗಿ ಸಾವಿನ ನಿಖರ ಕಾರಣ ತಿಳಿಯಲು ಇಬ್ಬರು ಮಕ್ಕಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಇದೀಗ ಹೊರಬಂದಿರುವ ಮರಣೋತ್ತರ ಪರೀಕ್ಷೆ (Postmortem) ವರದಿಯಲ್ಲಿ ಇಬ್ಬರೂ ಹಾವು ಕಚ್ಚಿದ್ದರಿಂದಲೇ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ. ಈ ವರದಿಯಿಂದ ಸಾವಿನ ಕಾರಣದ ಬಗ್ಗೆ ಇದ್ದ ಅನುಮಾನಗಳಿಗೆ ಸ್ಪಷ್ಟನೆ ಸಿಕ್ಕಿದೆ.
ಆಟವಾಡಿ ಮನೆಯ ತುಂಬಾ ಓಡಾಡಬೇಕಿದ್ದ ಇಬ್ಬರು ಮಕ್ಕಳು ಒಂದೇ ರಾತ್ರಿಯಲ್ಲಿ ಮೃತಪಟ್ಟಿರುವುದು ಕುಟುಂಬಕ್ಕೆ ಆಘಾತ ತಂದಿದೆ. ತಾಯಿಯ ಆರೋಗ್ಯದ ಬಗ್ಗೆ ಆತಂಕವೂ ಮುಂದುವರಿದಿದೆ. ಈ ದುರ್ಘಟನೆಯಿಂದ ಮೂಕನೂರು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.




