‘ಒಂದೇ ಒಂದು ಲಿಪ್ ಕಿಸ್ ಕೊಡು ಪ್ಲೀಸ್’.. ವಿದೇಶಿ ಯೂಟ್ಯೂಬರ್ಗೆ ಲೈವ್ನಲ್ಲೇ ವ್ಯಕ್ತಿ ಕಿರುಕುಳ
ಉದಯಪುರದಲ್ಲಿ ವಿದೇಶಿ ಯೂಟ್ಯೂಬರ್ ಲೈವ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಲಿಪ್ ಕಿಸ್ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾನೆ. ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ (Udaipur) ವಿದೇಶಿ ಮಹಿಳಾ ಯೂಟ್ಯೂಬರ್ ಒಬ್ಬರು ಲೈವ್ ಸ್ಟ್ರೀಮಿಂಗ್ (Live Streaming) ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ತನ್ನ ಅನುಭವಗಳನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಆಕೆಯ ಬಳಿ ಬಂದು ಮುತ್ತು ನೀಡುವಂತೆ ಒತ್ತಾಯಿಸಿದ್ದಾನೆ.
ಥಾಯ್ ಮತ್ತು ಫ್ರೆಂಚ್ ಮೂಲದ ಯೂಟ್ಯೂಬರ್ (Thai-French YouTuber) ಉದಯಪುರದ ಪ್ರವಾಸಿ ಸ್ಥಳಗಳ ಬಗ್ಗೆ ಮಾತನಾಡುತ್ತಿದ್ದಾಗ ಕಪ್ಪು ಬಣ್ಣದ ಉಡುಪು ಮತ್ತು ಟೋಪಿ ಧರಿಸಿದ್ದ ವ್ಯಕ್ತಿ ಆಕೆಯ ಬಳಿ ಬಂದಿದ್ದಾನೆ. ಬಳಿಕ ‘ಒಂದು ಲಿಪ್ ಕಿಸ್ ಕೊಡುತ್ತೀರಾ.. ಎಂದು ಪದೇಪದೆ ಕೇಳಿದ್ದಾನೆ. ಇದರಿಂದ ಮಹಿಳೆ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ನಿರಾಕರಿಸಿದರೂ ಬಿಡದ ಯುವಕ
ಆತನ ವರ್ತನೆಯಿಂದ ಅಸಹಜ ಪರಿಸ್ಥಿತಿ ಎದುರಾದರೂ ಯೂಟ್ಯೂಬರ್ ಶಾಂತವಾಗಿಯೇ ಪ್ರತಿಕ್ರಿಯಿಸಿದ್ದಾರೆ. ತನಗೆ ಆತನ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿ, ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಆದರೆ, ಆಕೆ ನಿರಾಕರಿಸಿದರೂ ಯುವಕ ತನ್ನ ವರ್ತನೆಯನ್ನು ಮುಂದುವರಿಸಿದ್ದಾನೆ.
ಈ ವೇಳೆ ಯೂಟ್ಯೂಬರ್ ಲೈವ್ನಲ್ಲಿದ್ದ ಕಾರಣ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಲ್ಲದೆ, ಸುತ್ತಮುತ್ತಲಿನ ಸಿಸಿಟಿವಿ (CCTV Footage) ಕ್ಯಾಮೆರಾಗಳಲ್ಲಿಯೂ ದೃಶ್ಯಗಳು ಸೆರೆಯಾಗಿವೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
23 ವರ್ಷದ ಯುವಕನ ಬಂಧನ
ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉದಯಪುರ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ. ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಕಿರುಕುಳ ನೀಡಿದ ವ್ಯಕ್ತಿಯನ್ನು ಗುರುತಿಸಿದ್ದಾರೆ. ಆತನನ್ನು 23 ವರ್ಷದ ಅಫ್ತಾಬ್ ಅಲಿಯಾಸ್ ಗಾಬ್ರೂ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita) 2023ರ ಸೆಕ್ಷನ್ 296ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಬಂಧನದ ಬಳಿಕ ಅಫ್ತಾಬ್ ತನ್ನ ವರ್ತನೆಗೆ ಕ್ಷಮೆಯಾಚಿಸಿ ವಿಡಿಯೋವೊಂದನ್ನು ಪ್ರಕಟಿಸಿದ್ದಾನೆ. ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳಿರುವ ಆತ, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾನೆ.




