ಶಾಲೆ-ಕಾಲೇಜುಗಳಲ್ಲಿ ಉಚಿತ ಆಧಾರ್ ಅಪ್‌ಡೇಟ್ ಶಿಬಿರ! ಮಕ್ಕಳಿಗೆ ವಿಶೇಷ ಸೌಲಭ್ಯ

ಮಕ್ಕಳ ಆಧಾರ್ ಕಾರ್ಡ್ ಬಯೋಮೆಟ್ರಿಕ್ ವಿವರಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಲು UIDAI ಮಹತ್ವದ ಪ್ರಕಟಣೆ ನೀಡಿದೆ. ದೇಶದಾದ್ಯಂತ ಶಾಲೆ-ಕಾಲೇಜುಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಲಾಗಿದೆ.

Aadhaar Update: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸಂಬಂಧ ಮಹತ್ವದ ಕ್ರಮ ಕೈಗೊಂಡಿದೆ. ದೇಶದಾದ್ಯಂತ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಿ ಮಕ್ಕಳ ಬಯೋಮೆಟ್ರಿಕ್ ವಿವರಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡುವ ಕಾರ್ಯ ನಡೆಯುತ್ತಿದೆ.

ಕಳೆದ ವರ್ಷ ಅಕ್ಟೋಬರ್ 1ರಿಂದ ಈ ಯೋಜನೆ ಆರಂಭಗೊಂಡಿದ್ದು, ಈಗಾಗಲೇ ಲಕ್ಷಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ. ಆರು ತಿಂಗಳ ಅವಧಿಯಲ್ಲಿ ಸುಮಾರು 1.2 ಕೋಟಿ ಮಕ್ಕಳ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಅಪ್‌ಡೇಟ್ ಮಾಡಲಾಗಿದೆ ಎಂದು UIDAI ತಿಳಿಸಿದೆ.

7 ರಿಂದ 15 ವರ್ಷದವರಿಗೆ ಕಡ್ಡಾಯ

UIDAI ಪ್ರಕಾರ 7 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ಈ ವಯಸ್ಸಿನಲ್ಲಿ ಮಕ್ಕಳ ಮುಖದ ಲಕ್ಷಣಗಳು ಹಾಗೂ ಬೆರಳಚ್ಚುಗಳಲ್ಲಿ ಬದಲಾವಣೆ ಆಗುವ ಕಾರಣ ಈ ಅಪ್‌ಡೇಟ್ ಅಗತ್ಯವಾಗುತ್ತದೆ.

ಸಾಮಾನ್ಯವಾಗಿ ಆಧಾರ್ ಸೇವಾ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ನಡೆಸಿದರೆ ಸೇವಾ ಶುಲ್ಕ ವಿಧಿಸಲಾಗುತ್ತದೆ. ಆದರೆ ಶಾಲೆ-ಕಾಲೇಜುಗಳಲ್ಲಿ ನಡೆಯುವ ವಿಶೇಷ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ತಮ್ಮ ವಿವರಗಳನ್ನು ಅಪ್‌ಡೇಟ್ ಮಾಡಿಸಿಕೊಳ್ಳಬಹುದು.

ಸರ್ಕಾರದ ಯೋಜನೆಗಳಿಗೆ ಸಹಕಾರಿ

ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಆಧಾರ್ ಕಾರ್ಡ್ ಪಡೆದಿರುತ್ತಾರೆ. ಆದರೆ ಕೆಲ ವರ್ಷಗಳ ನಂತರ ಬಯೋಮೆಟ್ರಿಕ್ ವಿವರಗಳಲ್ಲಿ ಬದಲಾವಣೆ ಆಗುವುದರಿಂದ ಅವುಗಳನ್ನು ನವೀಕರಿಸುವುದು ಮುಖ್ಯ. ಇದರಿಂದ ವಿದ್ಯಾರ್ಥಿಗಳಿಗೆ ಸರ್ಕಾರದ ವಿವಿಧ ಯೋಜನೆಗಳು, ವಿದ್ಯಾರ್ಥಿವೇತನಗಳು ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಸಹಾಯಕವಾಗುತ್ತದೆ.

NEET, JEE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ನೋಂದಣಿಯಲ್ಲೂ ಆಧಾರ್ ವಿವರಗಳು ಅಗತ್ಯವಾಗುತ್ತವೆ. ಇದೇ ಕಾರಣದಿಂದ UIDAI ಈ ವಿಶೇಷ ಅಭಿಯಾನ ಆರಂಭಿಸಿದೆ. ದೇಶದ ಅನೇಕ ರಾಜ್ಯಗಳಲ್ಲಿ ಪ್ರತೀ ತಿಂಗಳು ಶಾಲೆ-ಕಾಲೇಜುಗಳಲ್ಲಿ ಈ ಶಿಬಿರಗಳನ್ನು ನಡೆಸಲಾಗುತ್ತಿದೆ.

Related Stories