ಇದೇನಿದು ವಿಚಿತ್ರ! 26 ವರ್ಷದ ಯುವಕನಲ್ಲಿ ಗರ್ಭಾಶಯ ಪತ್ತೆ, ವೈದ್ಯರು ಶಾಕ್

26 ವರ್ಷದ ಯುವಕನಲ್ಲಿ ಗರ್ಭಾಶಯ ಪತ್ತೆಯಾಗಿದ್ದು, ಅಪರೂಪದ ಪರ್ಸಿಸ್ಟೆಂಟ್ ಮ್ಯುಲ್ಲೆರಿಯನ್ ಡಕ್ಟ್ ಸಿಂಡ್ರೋಮ್‌ ಕಾರಣವೆಂದು ವೈದ್ಯರು ತಿಳಿಸಿದ್ದಾರೆ.

ನವದೆಹಲಿ: 26 ವರ್ಷದ ಯುವಕನಿಗೆ ತನ್ನ ದೇಹದಲ್ಲೇ ಗರ್ಭಾಶಯವಿದೆ ಎಂಬುದು ತಿಳಿದುಬಂದಿರುವ ಅಪರೂಪದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಸಾಮಾನ್ಯ ಪರೀಕ್ಷೆ ಎಂದು ಆಸ್ಪತ್ರೆಗೆ ತೆರಳಿದ್ದ ಯುವಕನಿಗೆ ಸ್ಕ್ಯಾನ್‌ಗಳ ಬಳಿಕ ವೈದ್ಯರು ಈ ಅಚ್ಚರಿಯ ವಿಚಾರವನ್ನು ತಿಳಿಸಿದ್ದಾರೆ.

ವಂಧ್ಯತ್ವದ ಕಾರಣ ತಿಳಿಯಲು ನಡೆಸಿದ ಅಲ್ಟ್ರಾಸೌಂಡ್‌ (Ultrasound) ಹಾಗೂ ಎಂಆರ್‌ಐ (MRI) ಸ್ಕ್ಯಾನ್‌ನಲ್ಲಿ ಯುವಕನ ದೇಹದಲ್ಲಿ ಚೆನ್ನಾಗಿ ಅಭಿವೃದ್ಧಿ ಹೊಂದಿದ್ದ ಗರ್ಭಾಶಯ ಇರುವುದು ಪತ್ತೆಯಾಗಿದೆ. ಈ ಬಗ್ಗೆ ವೈದ್ಯರು ಹೆಚ್ಚಿನ ಪರಿಶೀಲನೆ ನಡೆಸಿದಾಗ ಆತನ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಅಪರೂಪದ ರಚನಾತ್ಮಕ ವ್ಯತ್ಯಾಸ ಇರುವುದು ಗೊತ್ತಾಗಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಪರ್ಸಿಸ್ಟೆಂಟ್ ಮ್ಯುಲ್ಲೆರಿಯನ್ ಡಕ್ಟ್ ಸಿಂಡ್ರೋಮ್‌ (PMDS) ಎಂಬ ಅಪರೂಪದ ಸ್ಥಿತಿಯಿಂದ ಪುರುಷ ದೇಹದಲ್ಲಿ ಗರ್ಭಾಶಯ ಉಳಿದುಕೊಳ್ಳಬಹುದು. ಸಾಮಾನ್ಯವಾಗಿ ಪುರುಷರಲ್ಲಿ ಭ್ರೂಣದ ಬೆಳವಣಿಗೆಯ ಸಂದರ್ಭದಲ್ಲಿ ಮ್ಯುಲ್ಲೆರಿಯನ್ ಡಕ್ಟ್ ಎಂಬ ರಚನೆ ಬೆಳವಣಿಗೆಯಾಗದೆ ಅಳಿದುಹೋಗುತ್ತದೆ. ಆದರೆ ಈ ಸ್ಥಿತಿಯಲ್ಲಿ ಅದು ಉಳಿದುಕೊಳ್ಳುತ್ತದೆ.

ಈ ಯುವಕನಿಗೆ ಸಾಮಾನ್ಯವಾಗಿ ಕಾಣುವ ಪುರುಷ ಜನನಾಂಗಗಳಿದ್ದರೂ, ದೇಹದ ಒಳಭಾಗದಲ್ಲಿ ಗರ್ಭಾಶಯ ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. ವೈದ್ಯರು ನಡೆಸಿದ ತಪಾಸಣೆಯಲ್ಲಿ ವೃಷಣಕೋಶದಲ್ಲಿ ಎರಡೂ ವೃಷಣಗಳು ಇಲ್ಲದಿರುವುದನ್ನೂ ಗಮನಿಸಿದ್ದಾರೆ.

ಇದಲ್ಲದೆ, ಯುವಕನ ವೀರ್ಯದಲ್ಲಿ ಶಕ್ರಕಣಗಳು ಪತ್ತೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಆತ ಎದುರಿಸುತ್ತಿದ್ದ ವಂಧ್ಯತ್ವದ ಸಮಸ್ಯೆಯ ಹಿನ್ನೆಲೆಯಲ್ಲೇ ಈ ಅಪರೂಪದ ದೈಹಿಕ ಸ್ಥಿತಿ ಬೆಳಕಿಗೆ ಬಂದಿದೆ.

ವಂಧ್ಯತ್ವ ತಜ್ಞ ಡಾ. ಸುಶೀಲ್ ಕರ್ಬಂದಾ (Dr. Sushil Karbanda) ಅವರ ಪ್ರಕಾರ, ವಂಧ್ಯತ್ವದ ಪರೀಕ್ಷೆ ಸಂದರ್ಭದಲ್ಲಿ ನಡೆಸಿದ ವಿವಿಧ ತಪಾಸಣೆಗಳಿಂದ ಈ ಅಸಾಮಾನ್ಯ ಸಂತಾನೋತ್ಪತ್ತಿ ವ್ಯವಸ್ಥೆಯ ರಚನೆ ಪತ್ತೆಯಾಗಿದೆ.

ಆಂಡ್ರಾಲಜಿಸ್ಟ್‌ ಡಾ. ಚಿರಾಗ್ ಭಂಡಾರಿ (Dr. Chirag Bhandari) ಅವರ ಪ್ರಕಾರ, ಪರ್ಸಿಸ್ಟೆಂಟ್ ಮ್ಯುಲ್ಲೆರಿಯನ್ ಡಕ್ಟ್ ಸಿಂಡ್ರೋಮ್ ಇರುವ ವ್ಯಕ್ತಿಯಲ್ಲಿ ವೃಷಣಗಳು ಮತ್ತು ಪುರುಷ ಜನನಾಂಗಗಳಂತಹ ಬಾಹ್ಯ ಪುರುಷ ಲಕ್ಷಣಗಳು ಸಾಮಾನ್ಯವಾಗಿರಬಹುದು. ಆದರೆ ದೇಹದ ಒಳಭಾಗದಲ್ಲಿ ಗರ್ಭಾಶಯ ಮತ್ತು ಕೆಲವೊಮ್ಮೆ ಇತರ ಮ್ಯುಲ್ಲೆರಿಯನ್ ರಚನೆಗಳು ಉಳಿದುಕೊಳ್ಳಬಹುದು.

ಈ ಸ್ಥಿತಿ ಇರುವುದರಿಂದ ವ್ಯಕ್ತಿಯ ಪುರುಷತ್ವಕ್ಕೆ ತೊಂದರೆ ಉಂಟಾಗುತ್ತದೆ ಎಂಬುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸಂತಾನೋತ್ಪತ್ತಿಯ ಸಾಧ್ಯತೆ ವ್ಯಕ್ತಿಯಲ್ಲಿರುವ ವೃಷಣಗಳ ಕಾರ್ಯಕ್ಷಮತೆ ಹಾಗೂ ಇತರ ವೈದ್ಯಕೀಯ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ವಂಧ್ಯತ್ವದಂತಹ ಸಮಸ್ಯೆಯೊಂದಕ್ಕೆ ಕಾರಣ ಹುಡುಕಲು ನಡೆಸಿದ ಸಾಮಾನ್ಯ ವೈದ್ಯಕೀಯ ಪರೀಕ್ಷೆಯೇ ಈ ಯುವಕನ ದೇಹದಲ್ಲಿದ್ದ ಅಪರೂಪದ ಸ್ಥಿತಿಯನ್ನು ಬಹಿರಂಗಪಡಿಸಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಇಂತಹ ಪ್ರಕರಣಗಳು ಅತ್ಯಂತ ಅಪರೂಪವಾಗಿರುವುದರಿಂದ ಇದು ಗಮನ ಸೆಳೆದಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories