ಲಾರಿಗೆ ವ್ಯಾನ್ ಡಿಕ್ಕಿ, ಭೀಕರ ಅಪಘಾತ: ಮೂವರು ಮಕ್ಕಳು ಸೇರಿ 9 ಮಂದಿ ಸಾವು
Van-Truck Crash Kills 9: ಮಹಾರಾಷ್ಟ್ರದ ಭಂಡಾರದಲ್ಲಿ ವೇಗವಾಗಿ ಬಂದ ಬೊಲೆರೋ ವ್ಯಾನ್ ಪೆಟ್ರೋಲ್ ಬಂಕ್‌ನಿಂದ ಹೆದ್ದಾರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಆರು ಮಹಿಳೆಯರು, ಮೂವರು ಮಕ್ಕಳು ಮೃತಪಟ್ಟಿದ್ದಾರೆ.

Van-Truck Crash Kills 9 : ಮಹಾರಾಷ್ಟ್ರದ (Maharashtra) ಭಂಡಾರ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತ (Road Accident)ದಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ನಾಗ್ಪುರ–ರಾಯ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಂಪಲ್‌ಗಾಂವ್ ಸಮೀಪ ಈ ದುರ್ಘಟನೆ ನಡೆದಿದೆ.
ಅಪಘಾತದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ತಕ್ಷಣ ರಕ್ಷಣಾ ಕಾರ್ಯಾಚರಣೆ (Rescue Operation) ಆರಂಭಿಸಿದ್ದಾರೆ. ಗಾಯಗೊಂಡವರನ್ನು ಸಕೋಲಿ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರ ಪ್ರಕಾರ, ಪೆಟ್ರೋಲ್ ಬಂಕ್‌ನಿಂದ ಹೆದ್ದಾರಿಗೆ ಬರುತ್ತಿದ್ದ ಲಾರಿಗೆ ವೇಗವಾಗಿ ಬಂದ ಬೊಲೆರೋ ವ್ಯಾನ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾನ್‌ನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.
ಮೃತಪಟ್ಟ 9 ಮಂದಿಯಲ್ಲಿ ಆರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರು ಕೂಡ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.
ಈ ನಡುವೆ ಅಪಘಾತಕ್ಕೆ ಅತಿವೇಗ (Overspeeding) ಕಾರಣವಾಗಿರಬಹುದೇ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ಹೆದ್ದಾರಿ ಸಮೀಪ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ, ಅಪಘಾತಕ್ಕೂ ಕೆಲವೇ ಕ್ಷಣಗಳ ಮೊದಲು ಬೊಲೆರೋ ವೇಗವಾಗಿ ಸಾಗುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.
ಲಾರಿಗೆ ಡಿಕ್ಕಿ ಹೊಡೆಯುವ ಮುನ್ನ ವ್ಯಾನ್ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ಚಾಲಕನ ತಪ್ಪಿನ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ (Investigation) ಮುಂದುವರಿದಿದೆ. ಅಪಘಾತಕ್ಕೆ ಕಾರಣವಾದ ಪರಿಸ್ಥಿತಿಗಳು ಮತ್ತು ವಾಹನಗಳ ಚಲನೆಯ ಕುರಿತು ಸಿಸಿಟಿವಿ ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.



