ಟ್ರ್ಯಾಕ್ ಮೇಲೆ ಉರುಳಿದ ಆಟೋ, ವಂದೇ ಭಾರತ್ ರೈಲಿಗೆ ಸ್ವಲ್ಪದರಲ್ಲೇ ತಪ್ಪಿದ ದುರಂತ
ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೊಡ್ಡ ಅಪಘಾತದಿಂದ ತಪ್ಪಿಸಿಕೊಂಡಿದೆ. ಮದ್ಯದ ನಶೆಯಲ್ಲಿ ಆಟೋ ಚಾಲಕ ಟ್ರ್ಯಾಕ್ ಮೇಲೆ ಬಿಟ್ಟಿದ್ದಾನೆ, ಲೊಕೋ ಪೈಲಟ್ ಎಚ್ಚರಿಕೆಯಿಂದ ಪ್ರಯಾಣಿಕರ ಜೀವ ಉಳಿಯಿತು.
- ಕೇರಳದಲ್ಲಿ ವಂದೇ ಭಾರತ್ ರೈಲು ಅಪಘಾತ ತಪ್ಪಿದ ಘಟನೆ
- ಟ್ರ್ಯಾಕ್ ಮೇಲೆ ಉರುಳಿದ ಆಟೋ, ಲೊಕೋ ಪೈಲಟ್ ತಕ್ಷಣ ಬ್ರೇಕ್
- ಮದ್ಯದ ನಶೆಯಲ್ಲಿದ್ದ ಆಟೋ ಚಾಲಕ ಪೊಲೀಸ್ ವಶ
ತಿರುವನಂತಪುರಂ: ಕೇರಳದಲ್ಲಿ ಮಂಗಳವಾರ ರಾತ್ರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರೀ ಅಪಘಾತದಿಂದ ಪಾರಾದ ಘಟನೆ ನಡೆದಿದೆ. ಅಕತಮುರಿ ಹಾಲ್ಟ್ ಸ್ಟೇಷನ್ ಸಮೀಪ ರೈಲು ಮಾರ್ಗದ ಮೇಲೆ ಉರುಳಿದ್ದ ಆಟೋವನ್ನು ಸಮಯಕ್ಕೆ ಸರಿಯಾಗಿ ಗಮನಿಸಿದ ಲೊಕೋ ಪೈಲಟ್‌ನ ಎಚ್ಚರಿಕೆ, ನೂರಾರು ಪ್ರಯಾಣಿಕರ ಪ್ರಾಣ ಉಳಿಸಿತು.
ರಾತ್ರಿ ಸುಮಾರು 10.10ರ ವೇಳೆಗೆ ವಂದೇ ಭಾರತ್ ರೈಲು ಅಕತಮುರಿ ಹಾಲ್ಟ್ ಸ್ಟೇಷನ್ ದಾಟುತ್ತಿದ್ದಾಗ, ಟ್ರ್ಯಾಕ್ ಮೇಲೆ ಆಟೋ ಬಿದ್ದಿರುವುದು ಲೊಕೋ ಪೈಲಟ್ ಗಮನಕ್ಕೆ ಬಂದಿದೆ. ತಕ್ಷಣವೇ ತುರ್ತು ಬ್ರೇಕ್ ಹಾಕಲಾಗಿದೆ. ಆದರೆ ವೇಗದಲ್ಲಿದ್ದ ರೈಲು ತಕ್ಷಣ ನಿಲ್ಲದೆ, ಉರುಳಿದ್ದ ಆಟೋವನ್ನು ಕೆಲ ಮೀಟರ್ ದೂರ ತಳ್ಳಿಕೊಂಡು ಹೋಗಿದೆ.
ಲೊಕೋ ಪೈಲಟ್ ಎಚ್ಚರಿಕೆ ಫಲಿತಾಂಶ
ಆಟೋ ಒಳಗೆ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಲೊಕೋ ಪೈಲಟ್ ಕ್ಷಣಮಾತ್ರ ತಡಮಾಡಿದ್ದರೂ, ರೈಲು ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಟ್ರ್ಯಾಕ್ ಮೇಲೆ ಬಿದ್ದಿದ್ದ ಆಟೋವನ್ನು ತೆರವುಗೊಳಿಸಿ, ಮಾರ್ಗದ ಭದ್ರತೆಯನ್ನು ಪರಿಶೀಲಿಸಿದ ಬಳಿಕ ರಾತ್ರಿ 11.15ರ ವೇಳೆಗೆ ರೈಲು ಸಂಚಾರವನ್ನು ಪುನರಾರಂಭಿಸಲಾಯಿತು.
ಮದ್ಯದ ನಶೆಯಲ್ಲಿ ಚಾಲಕನ ಅಜಾಗರೂಕತೆ
ಪೊಲೀಸ್ ತನಿಖೆಯಲ್ಲಿ ಆಟೋ ಚಾಲಕ ಮದ್ಯದ ನಶೆಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ ಮೇಲೆ ಆಟೋ ಉರುಳಿಸಿದ್ದಾನೆ ಎಂಬುದು ಗೊತ್ತಾಗಿದೆ. ನಂತರ ಅದನ್ನು ಅಲ್ಲಿಂದ ತೆಗೆದುಕೊಳ್ಳಲಾಗದೆ ಸ್ಥಳದಿಂದ ಜಾರಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುಧಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.







