ಇಂದು ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ! ರಾಜಕೀಯದಲ್ಲಿ ಹೊಸ ಅಧ್ಯಾಯ

ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದ್ದು, ಟಿವಿಕೆ ಮುಖ್ಯಸ್ಥ ವಿಜಯ್ ಇಂದು ಮುಖ್ಯಮಂತ್ರಿ ಪದಗ್ರಹಣ ಮಾಡಲಿದ್ದಾರೆ. ಚೆನ್ನೈನಲ್ಲಿ ನಡೆಯುವ ಸಮಾರಂಭಕ್ಕೆ ಹಲವು ರಾಷ್ಟ್ರೀಯ ನಾಯಕರು ಸಾಕ್ಷಿಯಾಗಲಿದ್ದಾರೆ.

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಸರ್ಕಾರ ರಚನೆ ಪ್ರಕ್ರಿಯೆಗೆ ಕೊನೆಗೂ ತೆರೆಬಿದ್ದಿದೆ. ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಇಂದು ಬೆಳಗ್ಗೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿದೆ.

ಸರ್ಕಾರ ರಚನೆಗೆ ಅಗತ್ಯ ಬಹುಮತದ ಬೆಂಬಲ ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಿದ ಬಳಿಕ ವಿಜಯ್ ಅವರನ್ನು ಅಧಿಕೃತವಾಗಿ ಸರ್ಕಾರ ರಚಿಸಲು ಆಹ್ವಾನಿಸಲಾಗಿದೆ. ಭಾನುವಾರ ಬೆಳಗ್ಗೆ 10 ಗಂಟೆಗೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ.

ಸಮಾರಂಭಕ್ಕೆ ರಾಷ್ಟ್ರೀಯ ನಾಯಕರ ಆಗಮನ

ವಿಜಯ್ ಪ್ರಮಾಣವಚನ ಸಮಾರಂಭಕ್ಕೆ ಹಲವು ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ಗಣ್ಯರು ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ವಿಜಯ್ ಅವರ ಮುಖ್ಯಮಂತ್ರಿ ಪದಗ್ರಹಣ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಬದಲಾವಣೆಯ ಸೂಚನೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ವಿಜಯ್ ಅಭಿಮಾನಿಗಳು ಮತ್ತು ಟಿವಿಕೆ ಕಾರ್ಯಕರ್ತರು ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಮೊದಲ ಸಚಿವ ಸಂಪುಟದಲ್ಲಿ ಯಾರು?

ಹೊಸ ಸರ್ಕಾರದ ಮೊದಲ ಹಂತದ ಸಚಿವ ಸಂಪುಟದಲ್ಲಿ ವಿಜಯ್ ಸೇರಿ ಒಂಬತ್ತು ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಪ್ರಮುಖ ಖಾತೆಗಳ ಹಂಚಿಕೆ ಕುರಿತೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ವಿಜಯ್ ಅವರು ಗೃಹ, ಪೊಲೀಸ್ ಮತ್ತು ಸಾರ್ವಜನಿಕ ಆಡಳಿತ ಸೇರಿದಂತೆ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್ ಅವರಿಗೆ ಲೋಕೋಪಯೋಗಿ ಇಲಾಖೆ ನೀಡುವ ಸಾಧ್ಯತೆ ಇದೆ.

ವಿವಿಧ ನಾಯಕರಿಗೆ ಪ್ರಮುಖ ಖಾತೆ

ಎನ್. ಆನಂದ್ ಅವರಿಗೆ ಪುರಸಭೆ ಆಡಳಿತ ಖಾತೆ, ಸಿಟಿಆರ್ ನಿರ್ಮಲ್ ಕುಮಾರ್ ಅವರಿಗೆ ಇಂಧನ ಇಲಾಖೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆಧವ್ ಅರ್ಜುನ ಅವರಿಗೆ ಕ್ರೀಡಾ ಅಭಿವೃದ್ಧಿ ಖಾತೆ ಸಿಗುವ ಸಾಧ್ಯತೆ ಇದೆ.

ರಾಜ್ ಮೋಹನ್ ಅವರಿಗೆ ಆದಿ ದ್ರಾವಿಡರ್ ಕಲ್ಯಾಣ ಇಲಾಖೆ, ವಿ.ಎನ್.ಎಸ್. ಮುಸ್ತಫಾ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ನೀಡುವ ನಿರೀಕ್ಷೆಯಿದೆ. ಶಾಲಾ ಶಿಕ್ಷಣ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳಿಗೂ ಹೊಸ ಮುಖಗಳು ಸೇರುವ ಸಾಧ್ಯತೆ ಇದೆ.

ಕಾಂಗ್ರೆಸ್‌ಗೂ ಸಂಪುಟದಲ್ಲಿ ಸ್ಥಾನ?

ವಿಧಾನಸಭಾ ಚುನಾವಣೆಯ ಬಳಿಕ ವಿಜಯ್ ನೇತೃತ್ವದ ಮೈತ್ರಿಗೆ ಬೆಂಬಲ ನೀಡಿದ್ದ ಕಾಂಗ್ರೆಸ್ ಪಕ್ಷಕ್ಕೂ ಸರ್ಕಾರದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕರಾದ ರಾಜೇಶ್ ಕುಮಾರ್ ಮತ್ತು ವಿಶ್ವನಾಥನ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories