ಈ ಊರಲ್ಲಿ ಗಣೇಶ ಚತುರ್ಥಿ ಆಚರಣೆ ಯಾವುದೇ ಕಾರಣಕ್ಕೂ ಮಾಡಲ್ಲ! ಏಕೆ ಗೊತ್ತಾ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಸದಂಪಳ್ಳಿ ಗ್ರಾಮವು ಗಣೇಶ ಚತುರ್ಥಿಯನ್ನು ಆಚರಿಸುವುದಿಲ್ಲ. ಪೀಳಿಗೆಗಳಿಂದ ಬಂದಿರುವ ಈ ಸಂಪ್ರದಾಯದ ಹಿಂದೆ ಗ್ರಾಮದ ಮಾರಮ್ಮ ದೇವಿಯ ಜಾತ್ರೆಯ ಮಹತ್ವವೇ ಪ್ರಮುಖ ಕಾರಣವಾಗಿದೆ.

ಆಂಧ್ರಪ್ರದೇಶದ (Andhra Pradesh) ಅನಂತಪುರ ಜಿಲ್ಲೆಯ ಶೆಟ್ಟೂರು ಮಂಡಲದ ಬಸದಂಪಳ್ಳಿ ಗ್ರಾಮವು (Village) ದೇಶದ ಅನೇಕ ಕಡೆಗಳಲ್ಲಿ ಕಾಣದ ಒಂದು ವಿಶಿಷ್ಟ ಪರಂಪರೆಯನ್ನು ಉಳಿಸಿಕೊಂಡಿದೆ. ಇಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವುದೇ ಇಲ್ಲ. ಪೀಳಿಗೆಗಳಿಂದ ಬಂದಿರುವ ಈ ಸಂಪ್ರದಾಯ ಇಂದು ಕೂಡಾ ಮುಂದುವರಿದಿದೆ.
ಗ್ರಾಮಸ್ಥರು ಪ್ರತಿವರ್ಷ ಶ್ರಾವಣ ಮಾಸದ ಕೊನೆ ವಾರದಲ್ಲಿ ಗ್ರಾಮದ ಆರಾಧ್ಯ ದೇವಿ ಮಾರಮ್ಮ ಜಾತ್ರೆಯನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಾರೆ. ಕೋಳಿ, ಮೇಕೆ ಬಲಿ ಕೊಡುವ ಸಂಪ್ರದಾಯ, ಬಂಧು-ಬಳಗದವರನ್ನು ಆಹ್ವಾನಿಸಿ ಊಟ ಮಾಡುವ ಪದ್ಧತಿ ಈ ಜಾತ್ರೆಯ ಪ್ರಮುಖ ಭಾಗವಾಗಿದೆ.
ಆದರೆ ಇದೇ ಸಮಯದಲ್ಲಿ ಗಣೇಶ ಚತುರ್ಥಿ ಬರುವುದರಿಂದ, ಬಲಿಪದ್ದತಿಗಳು ನಡೆಯುವ ಸಂದರ್ಭ ಗಣೇಶನ ಹಬ್ಬವನ್ನು ಆಚರಿಸುವುದು ಯೋಗ್ಯವಲ್ಲ ಎಂದು ಗ್ರಾಮಸ್ಥರು ನಂಬುತ್ತಾರೆ. ಗಣೇಶ ಚತುರ್ಥಿಯ ಪವಿತ್ರತೆಯು ಹಾಳಾಗಬಾರದು ಎಂಬ ಕಾರಣದಿಂದಲೇ ಈ ನಿರ್ಧಾರ ತಾಳಲಾಗಿದೆ.
ಗ್ರಾಮಸ್ಥರ ನಂಬಿಕೆಯ ಪ್ರಕಾರ, ಜಾತ್ರೆಯ ದಿನದಲ್ಲಿ ಬಸದಂಪಳ್ಳಿಯಿಂದ ಹೊರಗೆ ಹೋದರೆ ಅಶುಭ ಉಂಟಾಗುತ್ತದೆ, ಅನಾರೋಗ್ಯ ತಗುಲುತ್ತದೆ ಎಂಬ ಭಯವೂ ಇದೆ. ಆದ್ದರಿಂದಲೇ ಅವರು ಮಾರಮ್ಮ ಜಾತ್ರೆಯನ್ನು ಮಾತ್ರ ಮಹತ್ವದಿಂದ ನಡೆಸಿ, ಗಣೇಶ ಚತುರ್ಥಿಯನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತಾರೆ.
ಈ ವರ್ಷವೂ ಆಗಸ್ಟ್ 26ರಂದು ಮಾರಮ್ಮ ಜಾತ್ರೆ ನಡೆದಿದ್ದು, ಇಂದಿನ ದಿನ ಬಂದ ಗಣೇಶ ಚತುರ್ಥಿಯನ್ನು ಅವರು ಆಚರಿಸಲಿಲ್ಲ. ಹೀಗೆ ಬಸದಂಪಳ್ಳಿ ಗ್ರಾಮವು ಪೀಳಿಗೆಗಳಿಂದಲೇ ಗಣೇಶ ಚತುರ್ಥಿಯ ಆಚರಣೆಗೆ ದೂರವಾಗಿದೆ.
Village in Andhra Pradesh that doesn’t celebrate Ganesh Chaturthi







