ಭೀಕರ ಹತ್ಯೆ! ಗಂಡನ ಕೊಲೆಗೆ ಪತ್ನಿಯೇ ಸ್ಕೆಚ್, ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯ

ಉತ್ತರ ಪ್ರದೇಶದ ಮಥುರಾದಲ್ಲಿ ಮಗಳ ಪ್ರೇಮ ವಿಚಾರವಾಗಿ ಪತಿಯೊಂದಿಗೆ ಜಗಳ ನಡೆದ ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾಳೆ, ಮಗಳು ಹಾಗೂ ಪ್ರಿಯಕರ ಸಹಕರಿಸಿದ್ದಾರೆ.

  • ಕಲ್ಲಿನಿಂದ ತಲೆಗೆ ಹೊಡೆದು ಪತಿಯನ್ನು ಹತ್ಯೆ ಮಡಿದ ಪತ್ನಿ
  • ಪ್ರಕರಣದಲ್ಲಿ ಪುತ್ರಿ ಹಾಗೂ ಆಕೆಯ ಪ್ರಿಯಕರನೂ ಭಾಗಿ
  • ಇದುವರೆಗೆ ಮೃತದೇಹದ ಸುಳಿವು ಸಿಕ್ಕಿಲ್ಲ

ಲಕ್ನೋ: ಮಗಳ ಪ್ರೇಮ ವ್ಯವಹಾರಕ್ಕೆ ಸಂಬಂಧಿಸಿದ ಜಗಳ ಕೊನೆಗೆ ಗಂಡನ ಹತ್ಯೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದಿದೆ. ಪತಿಗೆ ಮದ್ದು ನೀಡಿ, ಬಳಿಕ ಕಲ್ಲಿನಿಂದ ತಲೆಗೆ ಹೊಡೆದು ಕೊಂದ ಆರೋಪ ಪತ್ನಿ, ಆಕೆಯ ಪುತ್ರಿ ಹಾಗೂ ಪುತ್ರಿಯ ಪ್ರಿಯಕರನ ಮೇಲಿದೆ.

ಜೈಸಿಂಗ್‌ಪುರದಲ್ಲಿ ವಾಸಿಸುತ್ತಿದ್ದ 42 ವರ್ಷದ ಮನೋಜ್ ಸೋನಿ ಏಪ್ರಿಲ್ 18ರಂದು ನಾಪತ್ತೆಯಾಗಿದ್ದರು. ಇದಕ್ಕೂ ಮುನ್ನ ಮನೋಜ್ ತನ್ನ ಕಿರಿಯ ಪುತ್ರಿ ಆಕೆಯ ಪ್ರಿಯಕರನೊಂದಿಗೆ ಇರುವುದನ್ನು ಕಂಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಪತ್ನಿ ನೈನಾ ಜೊತೆ ಮನೋಜ್ ಜಗಳ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನೋಜ್ ನಾಪತ್ತೆಯಾದ ಬಳಿಕ ಏಪ್ರಿಲ್ 21ರಂದು ನೈನಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಳು. ಆದರೆ ಮರುದಿನವೇ ಯಾವುದೇ ಸ್ಪಷ್ಟ ಕಾರಣ ನೀಡದೆ ಆ ದೂರನ್ನು ಹಿಂಪಡೆದುಕೊಂಡಿದ್ದಳು. ಬಳಿಕ ಪುತ್ರಿಯೊಂದಿಗೆ ಹತ್ರಾಸ್‌ನಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು.

ಪತಿ ನಾಪತ್ತೆಯಾಗಿದ್ದರೂ ನೈನಾ ಹೆಚ್ಚು ಆತಂಕದಲ್ಲಿರುವಂತೆ ಕಾಣಿಸದಿರುವುದು ಆಕೆಯ ತಂದೆ ಬ್ರಜ್‌ಮೋಹನ್‌ಗೆ ಅನುಮಾನ ಮೂಡಿಸಿತ್ತು. ಈ ಬಗ್ಗೆ ಮಗಳನ್ನು ಪ್ರಶ್ನಿಸಿದಾಗ ಮನೋಜ್ ಹತ್ಯೆಯ ವಿಚಾರ ಹೊರಬಿದ್ದಿದೆ ಎನ್ನಲಾಗಿದೆ.

ನೈನಾ ನೀಡಿದ ಮಾಹಿತಿಯ ಪ್ರಕಾರ, ಮನೋಜ್‌ಗೆ ಮದ್ದು ಬೆರೆಸಿದ ಹಾಲು ಕುಡಿಸಿ ಪ್ರಜ್ಞೆ ತಪ್ಪಿಸಿದ ಬಳಿಕ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿತ್ತು. ಈ ಕೃತ್ಯಕ್ಕೆ ಪುತ್ರಿ ಹಾಗೂ ಆಕೆಯ 22 ವರ್ಷದ ಪ್ರಿಯಕರ ವಿಮಲ್ ಚೌಧರಿ ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ.

ಹತ್ಯೆಯ ಬಳಿಕ ಮನೋಜ್‌ನ ಮೃತದೇಹವನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ದಹನ ಮಾಡಿ, ಅವಶೇಷಗಳನ್ನು ಅಲ್ಲಿಯೇ ಹೂತು ಹಾಕಿರುವುದಾಗಿ ನೈನಾ ತಿಳಿಸಿದ್ದಾಳೆ ಎನ್ನಲಾಗಿದೆ. ಈ ವಿಷಯ ತಿಳಿದ ಬ್ರಜ್‌ಮೋಹನ್ ಆಘಾತಗೊಂಡು ಮನೋಜ್‌ನ ಸಹೋದರ ರಾಮ್‌ಬಾಬುವಿಗೆ ಮಾಹಿತಿ ನೀಡಿದ್ದರು.

ರಾಮ್‌ಬಾಬು ಮೇ 9ರಂದು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಮುಖ್ಯಮಂತ್ರಿ ಪೋರ್ಟಲ್ ಮೂಲಕವೂ ದೂರು ಸಲ್ಲಿಸಲಾಗಿತ್ತು. ಎಸ್‌ಎಸ್‌ಪಿ ಸೂಚನೆ ಮೇರೆಗೆ ಜುಲೈ 11ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಅಂತಿಮವಾಗಿ ಆಗಸ್ಟ್ 7ರಂದು ಪತ್ನಿ, ಪುತ್ರಿ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದೀಗ ಮನೋಜ್‌ನ ಮೃತದೇಹಕ್ಕಾಗಿ ಅರಣ್ಯ ಪ್ರದೇಶದಲ್ಲಿ ಶೋಧ ಮುಂದುವರಿದಿದೆ. ಆರೋಪಿಗಳು ಮೃತದೇಹವನ್ನು ನಿಖರವಾಗಿ ಎಲ್ಲಿ ಹೂತಿದ್ದಾರೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಹಲವು ಸ್ಥಳಗಳಲ್ಲಿ ತೋಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ನಿರಂತರ ಮಳೆಯಿಂದ ಶೋಧ ಕಾರ್ಯಕ್ಕೂ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories