ಪತ್ನಿಯನ್ನು ಕೊಂದು ಮೃತದೇಹ ತುಂಡರಿಸಿ, ತಲೆಯನ್ನು ಫ್ರಿಜ್‌ನಲ್ಲಿಟ್ಟು ಪತಿ ಪರಾರಿ

ಅಸ್ಸಾಂನ ಗುವಾಹತಿಯಲ್ಲಿ ಮದುವೆಯಾಗಿ ಕೆಲವೇ ತಿಂಗಳಲ್ಲಿ ಮಹಿಳೆಯೊಬ್ಬರನ್ನು ಪತಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಬಳಿಕ ಮೃತದೇಹವನ್ನು ತುಂಡರಿಸಿ, ತಲೆಯನ್ನು ಫ್ರಿಜ್‌ನಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದ ಎನ್ನಲಾಗಿದೆ.

ಗುವಾಹತಿ: ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ (Guwahati) ಮದುವೆಯಾಗಿ ಕೆಲವೇ ತಿಂಗಳಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಹತ್ಯೆಯ ಬಳಿಕ ಮೃತದೇಹವನ್ನು ಛಿದ್ರಗೊಳಿಸಿ, ಆಕೆಯ ತಲೆಯನ್ನು ಫ್ರಿಜ್‌ನಲ್ಲಿ ಬಚ್ಚಿಟ್ಟಿದ್ದ ಎನ್ನಲಾಗಿದ್ದು, ಘಟನೆ ಬೆಳಕಿಗೆ ಬಂದಿರುವ ರೀತಿ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಅಪಾರ್ಟ್‌ಮೆಂಟ್‌ನಿಂದ ದುರ್ನಾತ (Foul Smell) ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಸೆಪ್ಟೆಂಬರ್ 6ರಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಮೃತರನ್ನು 25 ವರ್ಷದ ರಿಯಾ ತಾಲುಕ್‌ದಾರ್ (Riya Talukdar) ಎಂದು ಪೊಲೀಸರು ಗುರುತಿಸಿದ್ದಾರೆ. ಮೃತದೇಹದ ಸ್ಥಿತಿ ಗಂಭೀರವಾಗಿದ್ದು, ಕೈ ಬೆರಳುಗಳಿಗೂ ಗಾಯಗಳಾಗಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ. ದೇಹ ಕೊಳೆಯಲು ಆರಂಭವಾಗಿತ್ತು ಎನ್ನಲಾಗಿದೆ.

ಆದರೆ ಆರಂಭಿಕ ಪರಿಶೀಲನೆಯಲ್ಲಿ ಮಹಿಳೆಯ ತಲೆ ಕಾಣಿಸಿರಲಿಲ್ಲ. ಹೀಗಾಗಿ ಪೊಲೀಸರು ಮನೆಯೊಳಗೆ ಹೆಚ್ಚಿನ ಶೋಧ ನಡೆಸಿದ್ದಾರೆ. ಈ ವೇಳೆ ರೆಫ್ರಿಜರೇಟರ್‌ನಲ್ಲಿದ್ದ ಪಾಲಿಥಿನ್ ಚೀಲದಲ್ಲಿ ಆಕೆಯ ತಲೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ದಂಪತಿ ನೆರೆಹೊರೆಯವರ ಕಣ್ಣಿಗೆ ಬಿದ್ದಿರಲಿಲ್ಲ. ಅವರ ಮೊಬೈಲ್ ಫೋನ್‌ಗಳೂ ಸ್ವಿಚ್ ಆಫ್ ಆಗಿದ್ದವು ಎನ್ನಲಾಗಿದೆ. ಶುಕ್ರವಾರ ರಿಯಾ ಅವರ ಪತಿಯನ್ನು ಕೊನೆಯ ಬಾರಿ ನೋಡಿದ್ದಾಗಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ರಿಯಾ ಅವರ ಪತಿ ಸ್ಥಳದಿಂದ ನಾಪತ್ತೆಯಾಗಿದ್ದ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಭಾನುವಾರ ರಾತ್ರಿ ಆತನೇ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು (Police Investigation) ತನಿಖೆ ಮುಂದುವರಿಸಿದ್ದಾರೆ. ಪತ್ನಿಯನ್ನು ಹತ್ಯೆ ಮಾಡಲು ಕಾರಣವೇನು, ಘಟನೆಯ ಹಿಂದೆ ಬೇರೆ ಯಾವುದೇ ವಿಚಾರವಿದೆಯೇ ಮತ್ತು ಶರಣಾಗಲು ಕಾರಣವಾದ ಪರಿಸ್ಥಿತಿ ಏನು ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (Postmortem) ಕಳುಹಿಸಲಾಗಿದ್ದು, ತನಿಖೆಯ ಬಳಿಕ ಪ್ರಕರಣದ ಸಂಪೂರ್ಣ ಹಿನ್ನೆಲೆ ಸ್ಪಷ್ಟವಾಗುವ ನಿರೀಕ್ಷೆಯಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories