ಬರಿ 500 ರೂಪಾಯಿ ವಿಚಾರಕ್ಕೆ ಮಹಿಳೆಯನ್ನು ಅಟ್ಟಾಡಿಸಿ ಕೊಂದ ಧುರುಳರು
ಜಾರ್ಖಂಡ್‌ನಲ್ಲಿ ಕೇವಲ 500 ರೂಪಾಯಿ ಸಾಲದ ವಿಚಾರವಾಗಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿದೆ. 41 ವರ್ಷದ ಮಹಿಳೆಯನ್ನು ಅಟ್ಟಾಡಿಸಿ ಹಲ್ಲೆ ನಡೆಸಿ ಕೊಂದ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಂಚಿ: ಕೇವಲ 500 ರೂಪಾಯಿ ಹಣದ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಜಾರ್ಖಂಡ್‌ನಲ್ಲಿ (Jharkhand) ನಡೆದಿದೆ. ಹಣ ವಾಪಸ್ ನೀಡುವಂತೆ ಕೇಳಿದ 41 ವರ್ಷದ ಮಹಿಳೆಯ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ.
ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಹದಿಮಾರಾ ಗ್ರಾಮದಲ್ಲಿ ನವೆಂಬರ್ 11ರ ರಾತ್ರಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಜಿಂಗಿ ಬಂಕಿರಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಮೃತಪಟ್ಟಿದ್ದ ಪಾಂಡು ಗೋಪೆ ಎಂಬುವವರ ಬಳಿ ಜಿಂಗಿ 500 ರೂಪಾಯಿ ಪಡೆಯಬೇಕಿತ್ತು ಎನ್ನಲಾಗಿದೆ. ಪಾಂಡು ಅವರ ಪತ್ನಿ ರೀನಾ ಗೋಪೆ ಮನೆಯ ಹೊರಗೆ ಕೆಲವರು ಬೆಂಕಿ ಹಾಕಿಕೊಂಡು ಕುಳಿತಿದ್ದ ಸಂದರ್ಭದಲ್ಲಿ ಈ ಹಣದ ವಿಚಾರ ಮತ್ತೆ ಪ್ರಸ್ತಾಪವಾಗಿದೆ.
ಹಣ ಕೇಳಿದ್ದಕ್ಕೆ ಶುರುವಾಯ್ತು ಜಗಳ
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಪಾಂಡು ಅವರ ಅಂತ್ಯಕ್ರಿಯೆ ಬಳಿಕ ನಡೆಯುವ ‘ಮಾರ್ಖಿ’ ಸಂಪ್ರದಾಯ ಮುಗಿದ ನಂತರ ಕೆಲವರು ಮನೆಯ ಬಳಿ ಸೇರಿದ್ದರು. ಇದೇ ಸಮಯದಲ್ಲಿ ಅಲ್ಲಿಗೆ ಬಂದ ಜಿಂಗಿ, ತನ್ನ ಹಣವನ್ನು ವಾಪಸ್ ನೀಡದೆ ಪಾಂಡು ಮೃತಪಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಮಾತುಗಳಿಂದ ಅಲ್ಲಿದ್ದವರ ನಡುವೆ ವಾಗ್ವಾದ ಆರಂಭವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕೆಲವರು ಜಿಂಗಿ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಮಹಿಳೆ ಓಡಿ ಹೋಗಿ ಮನೆಯ ಹಿಂಭಾಗದ ತೋಟದಲ್ಲಿ ಅಡಗಿಕೊಂಡಿದ್ದರು. ಆದರೆ ಆರೋಪಿಗಳು ಅಲ್ಲಿಗೂ ಬೆನ್ನಟ್ಟಿ ಹೋಗಿ ಆಕೆಯನ್ನು ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡಲಿಲ್ಲ!
ಮಹಿಳೆಯ ಕೂದಲು ಹಿಡಿದು ರಸ್ತೆಗೆ ಎಳೆದುಕೊಂಡು ಬಂದು ದೊಣ್ಣೆ ಹಾಗೂ ಕೈಗಳಿಂದ ಹಲ್ಲೆ ನಡೆಸಲಾಗಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಜಿಂಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮಹಿಳೆಯ ಮಗ ಪ್ರೇಮ್ ಸಿಂಗ್ ಬಂಕಿರಾ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಗಾಗಿ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಆರು ಮಂದಿ ಬಂಧನ, ಸಾಕ್ಷ್ಯ ವಶಕ್ಕೆ
ಈ ಪ್ರಕರಣದಲ್ಲಿ ಸೂರಜ್ ಗೋಪೆ (25), ರಘು ಗೋಪೆ (19), ಗುಕುಲ್ ಗೋಪೆ ಅಲಿಯಾಸ್ ಲಾಂಗ್ರು (26), ರೀನಾ ಗೋಪೆ (32), ಮಧು ಗೋಪೆ ಅಲಿಯಾಸ್ ಕೋಚೆ ಮತ್ತು ಕೃಷ್ಣ ಗೋಪೆ ಅವರನ್ನು ಬಂಧಿಸಲಾಗಿದೆ.
ತನಿಖೆಯ ವೇಳೆ ಹಲ್ಲೆಗೆ ಬಳಸಲಾಗಿದೆ ಎಂದು ಶಂಕಿಸಿರುವ ರಕ್ತದ ಕಲೆಗಳಿರುವ ದೊಣ್ಣೆಗಳು, ಘಟನಾ ಸ್ಥಳದ ಮಣ್ಣಿನ ಮಾದರಿ, ಗಾಜಿನ ಚೂರುಗಳು ಹಾಗೂ ರಘು ಗೋಪೆಗೆ ಸೇರಿದ ಜೀನ್ಸ್ ಪ್ಯಾಂಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೇವಲ 500 ರೂಪಾಯಿ ಹಣದ ವಿಚಾರದಲ್ಲಿ ನಡೆದ ಈ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.










