Crime News: ಚಲಿಸುವ ಕಾರಿನಲ್ಲಿ ಮಹಿಳೆ ಮೇಲೆ ಗಂಟೆಗಟ್ಟಲೆ ಅತ್ಯಾಚಾರ! ನಂತರ ರಸ್ತೆಗೆ ಎಸೆದು...
ಹರಿಯಾಣದ ಫರೀದಾಬಾದ್‌ನಲ್ಲಿ ಚಲಿಸುವ ಕಾರಿನಲ್ಲಿ ಮಹಿಳೆ ಮೇಲೆ ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿ ಗಾಯಗೊಳಿಸಿ ರಸ್ತೆಗೆ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿದೆ

- ಫರೀದಾಬಾದ್‌ನಲ್ಲಿ ಚಲಿಸುವ ಕಾರಿನಲ್ಲಿ ಅತ್ಯಾಚಾರ
- ಗಾಯಗೊಂಡ ಮಹಿಳೆ ರಸ್ತೆಬದಿಯಲ್ಲಿ ಪತ್ತೆ
- ಅತ್ಯಾಚಾರ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ
ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಆತಂಕ ಮೂಡಿಸುವ ಘಟನೆ ಹರಿಯಾಣದ (Haryana Crime) ಫರೀದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ಕಾರಿನಲ್ಲೇ (Moving Car) ಯುವತಿ ಮೇಲೆ ದೌರ್ಜನ್ಯ (Gang Rape) ನಡೆಸಿ, ನಂತರ ರಸ್ತೆಗೆ ಎಸೆದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಷಯ ಬೆಳಕಿಗೆ ಬರಲು ವಿಳಂಬವಾಗಿದೆ. ಕುಟುಂಬದ ಜಗಳದ ಹಿನ್ನೆಲೆಯಲ್ಲಿ ಮಹಿಳೆ ಸೋಮವಾರ ಸಂಜೆ ಸ್ನೇಹಿತೆಯ ಮನೆಗೆ ತೆರಳಿದ್ದಳು. ರಾತ್ರಿ ಮನೆಗೆ ಮರಳಲು ಹೊರಟ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಎಳೆದೊಯ್ದು ಗಂಟೆಗಳ ಕಾಲ ದೌರ್ಜನ್ಯ
ಅರ್ಧರಾತ್ರಿ 12:30ರ ಸುಮಾರಿಗೆ ರಸ್ತೆಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ಮಹಿಳೆಯನ್ನು ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಲವಂತವಾಗಿ ಒಳಗೆ ಎಳೆದಿದ್ದಾರೆ. ಬಳಿಕ ಸುಮಾರು ಎರಡು ಗಂಟೆಗಳ ಕಾಲ ಚಲಿಸುತ್ತಿದ್ದ ಕಾರಿನಲ್ಲೇ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೆಳಗಿನ ಜಾವ 3ರ ವೇಳೆಗೆ ರಾಜಾ ಚೌಕ್ ಸಮೀಪ ಆಕೆಯನ್ನು ರಸ್ತೆಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡ ಮಹಿಳೆ ಸಹಾಯಕ್ಕಾಗಿ ಕುಟುಂಬಕ್ಕೆ ಕರೆ ಮಾಡಿದ್ದಾಳೆ. ಮಾಹಿತಿ ಪಡೆದ ಕುಟುಂಬದವರು ಸ್ಥಳಕ್ಕೆ ಧಾವಿಸಿ, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆಕೆಯ ಮುಖಕ್ಕೆ 12 ಹೊಲಿಗೆ ಹಾಕಿದ್ದು, ಪ್ರಸ್ತುತ ಚಿಕಿತ್ಸೆ ಮುಂದುವರಿದಿದೆ.
ಮಹಿಳೆ ವಿವಾಹವಾಗಿದ್ದು, ಮೂರು ಮಕ್ಕಳು ಇದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ದೌರ್ಜನ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



