Quadruplets: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ.. ಅಪರೂಪದ ಘಟನೆ
Quadruplets: ರಾಜಸ್ಥಾನದ ಝಲಾವರ್‌ನಲ್ಲಿ 25 ವರ್ಷದ ಮಹಿಳೆ ಒಂದೇ ಹೆರಿಗೆಯಲ್ಲಿ ನಾಲ್ಕು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಅವಧಿಗೂ ಮುನ್ನ ಜನಿಸಿದ ಮಕ್ಕಳಿಗೆ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Woman Gives Birth to Quadruplets: ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲೇ ಅಪರೂಪವೆನಿಸುವ ಘಟನೆ ನಡೆದಿದೆ. 25 ವರ್ಷದ ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ಈ ಸುದ್ದಿ ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.
ಝಲಾವರ್ ನಗರದ ಭೋಯ್ ಮೊಹಲ್ಲಾ ನಿವಾಸಿಗಳಾದ ಜ್ಯೋತಿ ಕಶ್ಯಪ್ ಮತ್ತು ಅರುಣ್ ಕಶ್ಯಪ್ ದಂಪತಿಗೆ ಇದು ಎರಡನೇ ಸಂತಾನವಾಗಿದೆ. ಗರ್ಭಿಣಿಯನ್ನು ಹೆರಿಗೆಗಾಗಿ ಸರ್ಕಾರಿ ಹೀರಾ ಕುನ್ವರ್ ಬಾ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ವೇಳೆ ಮೂರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಜನಿಸಿವೆ.
ಮಕ್ಕಳು ಸುಮಾರು 29 ವಾರಗಳಲ್ಲೇ ಜನಿಸಿದ ಕಾರಣ ಅವುಗಳ ತೂಕ ಕೇವಲ 1.1 ರಿಂದ 1.2 ಕೆಜಿ ಮಾತ್ರವಾಗಿದೆ. ಶ್ವಾಸಕೋಶ ಸಂಪೂರ್ಣವಾಗಿ ಬೆಳವಣಿಗೆಯಾಗದ ಹಿನ್ನೆಲೆಯಲ್ಲಿ ನಾಲ್ವರು ಶಿಶುಗಳನ್ನು ನವಜಾತ ಶಿಶು ತೀವ್ರ ನಿಗಾ ಘಟಕ (NICU)ದಲ್ಲಿ ಇರಿಸಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯರ ಪ್ರಕಾರ, ಪೂರ್ಣಾವಧಿಯ ಶಿಶುಗಳ ತೂಕ ಸಾಮಾನ್ಯವಾಗಿ 2.5 ಕೆಜಿಯಷ್ಟಿರುತ್ತದೆ. ಆದರೆ ಈ ಮಕ್ಕಳು ಅವಧಿಗೂ ಮುನ್ನ ಜನಿಸಿದ್ದರಿಂದ ಉಸಿರಾಟದ ನೆರವು ಸೇರಿದಂತೆ ಅಗತ್ಯ ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ. ತಮ್ಮ ವೈದ್ಯಕೀಯ ಸೇವಾ ಅವಧಿಯಲ್ಲಿ ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳು ಜನಿಸಿರುವುದನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಯಿ ಜ್ಯೋತಿ ಅವರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ನಾಲ್ವರು ಶಿಶುಗಳಲ್ಲಿ ಒಬ್ಬರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಉಳಿದ ಮೂವರು ವೈದ್ಯರ ನಿಗಾದಲ್ಲಿದ್ದಾರೆ. ನಾಲ್ಕು ಮಕ್ಕಳ ಜನನದಿಂದ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ದೇವರ ಆಶೀರ್ವಾದವೆಂದು ತಂದೆ ಅರುಣ್ ಕಶ್ಯಪ್ ಸಂತೋಷ ವ್ಯಕ್ತಪಡಿಸಿದ್ದಾರೆ.



