ರೈಲಿನಲ್ಲಿ ಮದ್ಯ ಸಾಗಿಸುತ್ತಿದ್ದ ಮಹಿಳೆ! 75 ಲೀಟರ್ ಮದ್ಯದೊಂದಿಗೆ ಅರೆಸ್ಟ್
ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿರುವ ನಡುವೆಯೇ ರೈಲಿನ ಫಸ್ಟ್ ಕ್ಲಾಸ್ ಎಸಿ ಕೋಚ್‌ನಲ್ಲಿ ಮಹಿಳೆಯೊಬ್ಬರು 75 ಲೀಟರ್ ವಿವಿಧ ಬ್ರಾಂಡ್‌ಗಳ ಮದ್ಯ ಸಾಗಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

- ರೈಲು AC ಕೋಚ್‌ನಲ್ಲಿ 75 ಲೀಟರ್ ಮದ್ಯ ಪತ್ತೆ
- ಮಹಿಳೆ ಬಂಧನ: ನೇಹಾ ಕುಮಾರಿ ಪೊಲೀಸರ ವಶಕ್ಕೆ
- ಮದ್ಯ ಸಾಗಣೆ: ರೈಲ್ವೆ ಪೊಲೀಸರು ತನಿಖೆ ಚುರುಕು
ಪಾಟ್ನಾ (Patna): ರೈಲಿನ ಎಸಿ ಕೋಚ್‌ನಲ್ಲಿ (AC Coach) ಭಾರೀ ಪ್ರಮಾಣದ ಮದ್ಯ ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದಲ್ಲಿ (Bihar) ಮದ್ಯ ಮಾರಾಟ ಮತ್ತು ಸೇವನೆ ಮೇಲೆ ನಿಷೇಧ ಜಾರಿಯಲ್ಲಿರುವ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ಗಮನ ಸೆಳೆದಿದೆ.
ನವದೆಹಲಿಯಿಂದ ಜಯನಗರಕ್ಕೆ ತೆರಳುತ್ತಿದ್ದ ‘ಸ್ವಾತಂತ್ರ್ಯ ಸೇನಾನಿ ಎಕ್ಸ್‌ಪ್ರೆಸ್’ ರೈಲಿನ ಎಚ್-1 ಫಸ್ಟ್ ಕ್ಲಾಸ್ ಎಸಿ ಕೋಚ್‌ನಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ಮದ್ಯ ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ರೈಲ್ವೆ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೆ ಪೊಲೀಸ್ (GRP) ಹಾಗೂ ಸಿಐಬಿ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ.
ರೈಲು ಸಮಸ್ತಿಪುರ (Samastipur) ನಿಲ್ದಾಣ ತಲುಪುತ್ತಿದ್ದಂತೆ ಅಧಿಕಾರಿಗಳು ಎಸಿ ಕೋಚ್‌ಗೆ ತೆರಳಿ ಮಹಿಳೆಯ ಲಗೇಜ್‌ಗಳನ್ನು ಪರಿಶೀಲಿಸಿದ್ದಾರೆ. ಬ್ಯಾಗ್‌ಗಳು ಮತ್ತು ಬ್ರಿಫ್‌ಕೇಸ್‌ಗಳನ್ನು ತೆರೆದು ನೋಡಿದಾಗ ವಿವಿಧ ಬ್ರಾಂಡ್‌ಗಳ ಸುಮಾರು 75 ಲೀಟರ್ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಕೂಡಲೇ ಮದ್ಯವನ್ನು ವಶಕ್ಕೆ ಪಡೆದು ಮಹಿಳೆಯನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ ಬಂಧಿತ ಮಹಿಳೆಯನ್ನು ನೇಹಾ ಕುಮಾರಿ ಅಲಿಯಾಸ್ ನೇಹಾ ಝಾ ಎಂದು ಗುರುತಿಸಲಾಗಿದೆ. ಸದ್ಯ ಆಕೆಯ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಯುತ್ತಿದ್ದು, ಮದ್ಯವನ್ನು ಎಲ್ಲಿಂದ ತರಲಾಗಿತ್ತು ಮತ್ತು ಯಾರಿಗೆ ತಲುಪಿಸಲು ಉದ್ದೇಶಿಸಲಾಗಿತ್ತು ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ತನಿಖೆಯ ವೇಳೆ ನೇಹಾ ಹಾಗೂ ಆಕೆಯ ಸಹೋದರಿಯರು ದರ್ಭಂಗಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದು ಬೆಳಕಿಗೆ ಬಂದಿದೆ. ಆಕೆಯ ಓರ್ವ ಸಹೋದರಿ ವಿರುದ್ಧ ಈ ಹಿಂದೆ ಮದ್ಯ ಸಂಬಂಧಿತ ಪ್ರಕರಣ ದಾಖಲಾಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಇದಲ್ಲದೆ, ಕೃಷಿ ಕೆಲಸ ಮಾಡುತ್ತಿರುವ ನೇಹಾ ತಂದೆ ಪಂಕಜ್ ಕುಮಾರ್ ಝಾ ಅವರನ್ನೂ ಎರಡು ವರ್ಷಗಳ ಹಿಂದೆ ಮದ್ಯ ಸಂಬಂಧಿತ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನೇಹಾ ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಆದರೆ ನೇಹಾ ವಿರುದ್ಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಟುಂಬದ ಹಿಂದಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಮದ್ಯದ ಅಕ್ರಮ ವಹಿವಾಟಿನ ಜಾಲದ (Liquor Network) ಜೊತೆ ಆಕೆಗೆ ಸಂಪರ್ಕವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಬಂಧಿತ ಮಹಿಳೆಗೆ ವೈದ್ಯರು ಹಾಗೂ ಕೆಲವು ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕವಿದೆ ಎಂಬ ಮಾಹಿತಿಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ವಶಪಡಿಸಿಕೊಂಡ ಮದ್ಯದ ಮೂಲ, ಅದನ್ನು ತಲುಪಿಸಬೇಕಿದ್ದ ವ್ಯಕ್ತಿಗಳು ಹಾಗೂ ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.



