ಬಾಯ್ಫ್ರೆಂಡ್ ಜೊತೆಗಿದ್ದ ವಿಡಿಯೋ ವೈರಲ್! ಸುತ್ತಿಗೆಯಿಂದ ತಲೆ ಜಜ್ಜಿ ತಂದೆ, ಸಹೋದರನಿಂದ ಯುವತಿ ಹತ್ಯೆ
ಅಹಮದಾಬಾದ್ನಲ್ಲಿ ಬಾಯ್ಫ್ರೆಂಡ್ ಜೊತೆಗಿನ ವಿಡಿಯೋ ವೈರಲ್ ಆದ ಬಳಿಕ ಕುಟುಂಬದ ಮರ್ಯಾದೆಗೆ ಧಕ್ಕೆ ಬಂದಿದೆ ಎಂದು ಆರೋಪಿಸಿ ಯುವತಿಯನ್ನು ತಂದೆ ಮತ್ತು ಸಹೋದರ ಹತ್ಯೆಗೈದಿದ್ದಾರೆ. ಪ್ರಕರಣದ ತನಿಖೆಯಲ್ಲಿ ಸತ್ಯ ಬಯಲಾಗಿದೆ. ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

- ಯುವತಿ ಹತ್ಯೆ ಪ್ರಕರಣದಲ್ಲಿ ತಂದೆ, ಸಹೋದರ ಬಂಧನ
- ವಿಡಿಯೋ ವೈರಲ್ ಆದ ಬಳಿಕ ಕೃತ್ಯ
- ಅಹಮದಾಬಾದ್ನಲ್ಲಿ ಪ್ರಕರಣದ ತನಿಖೆ ಚುರುಕು
ಅಹಮದಾಬಾದ್ (Ahmedabad): ಬಾಯ್ಫ್ರೆಂಡ್ ಜೊತೆಗಿದ್ದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರ ಸೇರಿ ಹತ್ಯೆ ಮಾಡಿದ (Honour Killing) ಆರೋಪ ಕೇಳಿಬಂದಿದೆ. ಪ್ರಕರಣವನ್ನು ಮೊದಲು ರಸ್ತೆ ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಲಾಗಿದ್ದು, ತನಿಖೆ ವೇಳೆ ನಿಜಾಂಶ ಹೊರಬಂದಿದೆ.
ಈ ಘಟನೆ ಅಹಮದಾಬಾದ್ನ ಸರ್ಖೇಜ್ ಪ್ರದೇಶದಲ್ಲಿ ಕಳೆದ ತಿಂಗಳು ನಡೆದಿದೆ. ಮೃತ ಯುವತಿಯನ್ನು 22 ವರ್ಷದ ಸೋಫಿಯಾ (Sofia) ಎಂದು ಗುರುತಿಸಲಾಗಿದೆ. ಆಕೆಯ ತಂದೆ ಮೊಹಮ್ಮದ್ ಫಾರೂಕ್ ನವಾಬ್ಖಾನ್ (Mohammed Farooq Nawabkhan), 56, ಮತ್ತು ಸಹೋದರ ಹಬಿಲ್ ಫಾರೂಕ್ (Habil Farooq), 38, ಪ್ರಕರಣದ ಆರೋಪಿಗಳಾಗಿದ್ದಾರೆ.
ಸುಮಾರು ಮೂರು ತಿಂಗಳ ಹಿಂದೆ ಸೋಫಿಯಾ ತನ್ನ ಬಾಯ್ಫ್ರೆಂಡ್ ಜೊತೆಗಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಇದರಿಂದ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ತಂದೆ ಮತ್ತು ಸಹೋದರ ಭಾವಿಸಿದ್ದರು ಎನ್ನಲಾಗಿದೆ. ಬಳಿಕ ಯುವತಿಗೆ ಇನ್ನು ಮುಂದೆ ಯುವಕರಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರೂ, ಅವರ ಆಕ್ರೋಶ ಕಡಿಮೆಯಾಗಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆಗಸ್ಟ್ 12ರ ರಾತ್ರಿ ಸೋಫಿಯಾಳನ್ನು ಸಹೋದರ ಬೈಕ್ನಲ್ಲಿ ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಅಲ್ಲಿ ತಂದೆಯೂ ಹಾಜರಿದ್ದು, ಇಬ್ಬರೂ ಸೇರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದ ಸೋಫಿಯಾಳನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಳು.
ಘಟನೆ ತಮ್ಮ ಮೇಲೆ ಬರಬಾರದು ಎಂಬ ಉದ್ದೇಶದಿಂದ ತಂದೆ ಮತ್ತು ಸಹೋದರ ರಸ್ತೆ ಅಪಘಾತದ (Road Accident) ಕಥೆ ಕಟ್ಟಿದ್ದಾರೆ ಎನ್ನಲಾಗಿದೆ. ಬೈಕ್ನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರಂಭದಲ್ಲಿ ಪೊಲೀಸರು ಇದನ್ನು ರಸ್ತೆ ಅಪಘಾತ ಹಾಗೂ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಸೋಫಿಯಾಳ ಗಾಯಗಳ ಸ್ವರೂಪದ ಬಗ್ಗೆ ಅನುಮಾನ ಮೂಡಿತ್ತು. ಈ ಮಾಹಿತಿ ಪೊಲೀಸರಿಗೆ ತಲುಪಿದ ಬಳಿಕ ತನಿಖೆಯ ದಿಕ್ಕು ಬದಲಾಗಿದೆ.
ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದಾಗ ತಂದೆ ಮತ್ತು ಸಹೋದರನ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎನ್ನಲಾಗಿದೆ. ಬಳಿಕ ಲಭ್ಯವಾದ ಸಾಕ್ಷ್ಯಗಳು ಹಾಗೂ ವಿಚಾರಣೆಯ ಆಧಾರದ ಮೇಲೆ ಇಬ್ಬರೂ ಸೇರಿ ಯುವತಿಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದಾರೆ. ಯುವತಿಯ ವೈಯಕ್ತಿಕ ಜೀವನದ ವಿಚಾರವನ್ನು ನೆಪ ಮಾಡಿಕೊಂಡು ನಡೆದಿರುವ ಈ ಕೃತ್ಯ ಇದೀಗ ಅಹಮದಾಬಾದ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



