ಬೈಕ್ ಇಎಂಐ ಕಟ್ಟಲು ಹಣ ಬೇಕಿತ್ತು: ಕೊಡದ ಪ್ರೇಯಸಿಯನ್ನೇ ಕೊಲೆಗೈದ ಪ್ರಿಯಕರ!
ಬೆಳಗಾವಿಯಲ್ಲಿ ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಗೃಹಿಣಿಯ ಕೊಲೆ ಪ್ರಕರಣ ಬಯಲಾಗಿದೆ. ಬೈಕ್ ಕಂತು ಕಟ್ಟಲು ಹಣ ನೀಡದಿದ್ದಕ್ಕೆ ಪ್ರಿಯಕರನೇ ಮಹಿಳೆಯನ್ನು ಕೊಂದಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಬೆಳಗಾವಿ (Belagavi): ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಗೃಹಿಣಿಯೊಬ್ಬರ ಪ್ರಕರಣ ಇದೀಗ ಕೊಲೆಯಲ್ಲಿ ಅಂತ್ಯಗೊಂಡಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಹಣದ ವಿಚಾರಕ್ಕೆ ಪ್ರಿಯಕರನೇ ಮಹಿಳೆಯನ್ನು ಹತ್ಯೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ಕೌಜಲಗಿ ಗ್ರಾಮದ ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಸುಮಾರು 15 ವರ್ಷಗಳ ಹಿಂದೆ ಸಿದ್ದಪ್ಪ ಅವರನ್ನು ವಿವಾಹವಾಗಿದ್ದ ಅನ್ನಪೂರ್ಣ ಅವರಿಗೆ ಇಬ್ಬರು ಮಕ್ಕಳಿದ್ದರು. ದಂಪತಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಜೀವನ ನಡೆಸುತ್ತಿದ್ದರು. ಯಾವುದೇ ದೊಡ್ಡ ಕಲಹವಿಲ್ಲದೆ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಆಕೆಯ ನಾಪತ್ತೆ ಭಾರಿ ಆಘಾತ ನೀಡಿತ್ತು.
ಅನ್ನಪೂರ್ಣ ನಾಪತ್ತೆಯಾದ ಬಳಿಕ ಪತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಕೊನೆಯ ದಿನಗಳ ಚಲನವಲನ ಹಾಗೂ ಮೊಬೈಲ್ ಸಂಪರ್ಕಗಳ ಬಗ್ಗೆ ತನಿಖೆ ಆರಂಭಿಸಿದ್ದರು. ಇದೇ ವೇಳೆ ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು.
ಸುಮಾರು ನಾಲ್ಕು ವರ್ಷಗಳ ಹಿಂದೆ ಕೌಜಲಗಿಯಲ್ಲಿ ಮನೆ ನಿರ್ಮಾಣದ ಕೆಲಸಕ್ಕೆ ಬಂದಿದ್ದ ದಿಲೀಪ್ ಗಡಕರಿ (Dileep Gadkari)ಗೆ ಅನ್ನಪೂರ್ಣ ಪರಿಚಯವಾಗಿತ್ತು. ನಂತರ ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದು, ಅವರ ನಡುವೆ ಆಪ್ತ ಸಂಬಂಧ ಬೆಳೆದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ದಿಲೀಪ್ ಈಗಾಗಲೇ ವಿವಾಹವಾಗಿದ್ದು, ನಾಲ್ಕು ಮಕ್ಕಳಿದ್ದರೂ ಅನ್ನಪೂರ್ಣ ಜೊತೆಗಿನ ಸಂಪರ್ಕ ಮುಂದುವರಿಸಿದ್ದ ಎನ್ನಲಾಗಿದೆ.
ಇದರ ನಡುವೆ ದಿಲೀಪ್ ಹೊಸ ಬೈಕ್‌ವೊಂದನ್ನು EMI (Bike EMI) ಮೂಲಕ ಖರೀದಿಸಿದ್ದ. ಕಂತು ಪಾವತಿಸಲು ಹಣದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಅನ್ನಪೂರ್ಣ ಬಳಿ ಹಣ ನೀಡುವಂತೆ ಪದೇಪದೇ ಕೇಳುತ್ತಿದ್ದ ಎನ್ನಲಾಗಿದೆ. ಆದರೆ ಆಕೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.
ಜುಲೈ 23ರಂದು ಹಣದ ವಿಚಾರ ಮಾತನಾಡುವ ನೆಪದಲ್ಲಿ ಅನ್ನಪೂರ್ಣಳನ್ನು ಊರ ಹೊರವಲಯಕ್ಕೆ ಕರೆಸಿಕೊಂಡಿದ್ದ ದಿಲೀಪ್, ಕಬ್ಬಿನ ಗದ್ದೆಯಲ್ಲಿ ಆಕೆಯೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ. ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಿ, ಆಕೆಯ ಬಳಿಯಿದ್ದ ಚಿನ್ನದ ಸರ, ಕಿವಿಯೋಲೆ ಹಾಗೂ ಮೊಬೈಲ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆ ಪ್ರಕರಣದ ತನಿಖೆ ವೇಳೆ ಅನ್ನಪೂರ್ಣಗೆ ಕೊನೆಯದಾಗಿ ಕರೆ ಮಾಡಿದ್ದ ವ್ಯಕ್ತಿ ದಿಲೀಪ್ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ. ಮತ್ತೊಂದೆಡೆ ಆಕೆಯ ಮೊಬೈಲ್‌ನಲ್ಲಿ ಬೇರೆ ಸಿಮ್ ಹಾಕಿ ಅದನ್ನು ಬಳಸಲಾಗುತ್ತಿರುವುದು ಪತ್ತೆಯಾಯಿತು. ಮೊಬೈಲ್ ಲೊಕೇಶನ್ (Mobile Location) ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದಾಗ ಅದರ ಜಾಡು ಮಧ್ಯಪ್ರದೇಶದತ್ತ ಸಾಗಿರುವುದು ತಿಳಿದುಬಂದಿದೆ.
ಮೊಬೈಲ್ ವಿಚಾರಣೆ ಮುಂದುವರಿಸಿದಾಗ ಕೊಲ್ಲಾಪುರದಲ್ಲಿದ್ದ ಸತ್ಯಪ್ಪ ಎಂಬ ವ್ಯಕ್ತಿ ಪೊಲೀಸರ ಸಂಪರ್ಕಕ್ಕೆ ಬಂದಿದ್ದಾನೆ. ಅನ್ನಪೂರ್ಣಳ ಮೊಬೈಲ್ ಅನ್ನು ದಿಲೀಪ್ ತನಗೆ ನೀಡಿದ್ದಾಗಿ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ದಿಲೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಹಣದ ಕೊರತೆಯಿಂದ ಬೈಕ್‌ನ EMI ಪಾವತಿಸಲು ಸಾಧ್ಯವಾಗುತ್ತಿರಲಿಲ್ಲ. ಅನ್ನಪೂರ್ಣ ಬಳಿ ಹಣ ಕೇಳಿದ್ದೆ, ಆದರೆ ಆಕೆ ನೀಡದ ಕಾರಣ ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಬೆಳಗಾವಿ ಎಸ್ಪಿ ಕೆ. ರಾಮರಾಜನ್ (K. Ramrajan) ಅವರ ಮಾರ್ಗದರ್ಶನದಲ್ಲಿ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿದ್ದಾರೆ. ಹಿಂಡಲಗಾ ಜೈಲಿಗೆ ಕಳುಹಿಸಲಾಗಿದ್ದು, ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಅನ್ನಪೂರ್ಣಳ ಹತ್ಯೆಯಿಂದ ಆಕೆಯ ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಮತ್ತೊಂದೆಡೆ ಆರೋಪಿಯ ಕುಟುಂಬವೂ ಸಂಕಷ್ಟಕ್ಕೆ ಸಿಲುಕಿದೆ. ಹಣದ ವಿಚಾರ ಮತ್ತು ವೈಯಕ್ತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿರುವ ಈ ಘಟನೆ ಕೌಜಲಗಿ ಗ್ರಾಮದಲ್ಲಿ ಆತಂಕ ಮೂಡಿಸಿದೆ.



