ಹೆರಿಗೆಯ ನಂತರ ಮಗುವನ್ನು ಕೊಂದು, ಕಸದ ಬುಟ್ಟಿಗೆ ಹಾಕಿದ ತಾಯಿ
ದೆಹಲಿ ಪಟೇಲ್ ನಗರದಲ್ಲಿ 26 ವರ್ಷದ ಮಹಿಳೆ ಬಾತ್‌ರೂಮ್‌ನಲ್ಲಿ ಮಗುವಿಗೆ ಜನ್ಮ ನೀಡಿ, ಬಳಿಕ ಕೊಲೆ ಮಾಡಿ ಕಸದ ಬುಟ್ಟಿಗೆ ಎಸೆದ ಆರೋಪ. ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ

ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಹೃದಯ ಕಲುಕುವ ಘಟನೆ ಬೆಳಕಿಗೆ ಬಂದಿದೆ. ಪಟೇಲ್ ನಗರದಲ್ಲಿನ ಮನೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ರೋಷ್ನಿ ಎಂಬ ಮಹಿಳೆ ಬಾತ್‌ರೂಮ್‌ನಲ್ಲೇ ಮಗುವಿಗೆ ಜನ್ಮ ನೀಡಿ, ಬಳಿಕ ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತಳಾಗಿದ್ದಾಳೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದ ರಾಯ್‌ಬರೇಲಿಯ ರೋಷ್ನಿ 2019ರಲ್ಲಿ ವಿವಾಹವಾಗಿದ್ದರೂ, 2021ರಲ್ಲಿ ಪತಿಯೊಂದಿಗೆ ವಿಚ್ಛೇದನ ಪಡೆದಿದ್ದಳು. 2023ರಿಂದ ದೆಹಲಿಯ ಪಟೇಲ್ ನಗರದಲ್ಲಿ ಮನೆ ಕೆಲಸ ಮಾಡುತ್ತಿದ್ದ ಆಕೆ, ಕಳೆದ ವರ್ಷ ತಮ್ಮ ಊರಿನ ಮದುವೆಗೆ ತೆರಳಿದಾಗ ಪ್ರಿಯಕರನೊಂದಿಗೆ ಶಾರೀರಿಕ ಸಂಪರ್ಕ ಹೊಂದಿದ್ದಳು. ನಂತರ ದೆಹಲಿಗೆ ವಾಪಸ್ಸಾದ ಆಕೆ ಗರ್ಭಿಣಿಯಾಗಿದ್ದರೂ, ಈ ವಿಷಯವನ್ನು ಮನೆಯವರಿಗೂ, ಮಾಲೀಕರಿಗೂ ಮುಚ್ಚಿಟ್ಟಿದ್ದಳು.
ಗರ್ಭವನ್ನು ಮುಚ್ಚಿಡಲು ಹೊಟ್ಟೆ ನೋವಿದೆ ಎಂದು ಹೇಳಿಕೊಂಡ ರೋಷ್ನಿಗೆ, ಮನೆ ಮಾಲೀಕರು ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದರು. ಆದರೆ ಜುಲೈ 26ರಂದು ಮನೆ ಮಾಲೀಕರ ಕುಟುಂಬ ಹೊರಗಡೆ ಹೋಗಿದ್ದಾಗ, ಬಾತ್‌ರೂಮ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದಳು. ಮಗುವಿನ ವಿಷಯ ಬಯಲಾಗುವ ಭಯದಿಂದ ಆಕೆ ಮಗುವಿನ ಕುತ್ತಿಗೆಗೆ ಬಟ್ಟೆ ಸುತ್ತಿ ಉಸಿರುಗಟ್ಟಿಸಿ ಕೊಂದಳು.
ಆಮೇಲೆ ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಮನೆಯ ಆವರಣದಲ್ಲಿದ್ದ ಕಸದ ಬುಟ್ಟಿಗೆ ಎಸೆದು, ಸ್ಥಳದಿಂದ ಹೊರಟು ಹೋಗಿದ್ದಳು. ಜುಲೈ 28ರಂದು ಸ್ವಚ್ಛತಾ ಸಿಬ್ಬಂದಿ ಡಸ್ಟ್‌ಬಿನ್‌ನಿಂದ ಆ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಶವವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿದ ವೈದ್ಯರು, ಗಟ್ಟಿಯಾದ ಬಟ್ಟೆ ಸುತ್ತಿ ಉಸಿರುಗಟ್ಟಿಸುವ ಮೂಲಕ ಕೊಲೆ ನಡೆದಿರುವುದನ್ನು ದೃಢಪಡಿಸಿದರು. ಬಳಿಕ ರೋಷ್ನಿಯನ್ನು ಪತ್ತೆಹಚ್ಚಿದ ಪೊಲೀಸರು ಬಂಧಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರನನ್ನೂ ವಿಚಾರಣೆ ಮಾಡಲಾಗುತ್ತಿದ್ದು, ಅಗತ್ಯವಿದ್ದರೆ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Woman Kills Newborn in Bathroom, Arrested in Delhi







