ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ! 23 ವರ್ಷದ ಯೂಟ್ಯೂಬರ್ ಹಾಗೂ ಅವರ ತಾಯಿ ಸಾವು
Chhavi Varshney: ಮಧ್ಯಪ್ರದೇಶದ ಉಜ್ಜೈನ್-ಗರೋತ್ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 23 ವರ್ಷದ ಯೂಟ್ಯೂಬರ್ ಛಾವಿ ವಶ್ವರಿಣಿ ಹಾಗೂ ಅವರ ತಾಯಿ ಮೃತಪಟ್ಟಿದ್ದಾರೆ.

Chhavi Varshney: ಮಧ್ಯಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತ (Road Accident) ಇದೀಗ ಕುಟುಂಬವೊಂದಕ್ಕೆ ದೊಡ್ಡ ಆಘಾತ ತಂದಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಮಹಾ ಖಾಸ್ ಗ್ರಾಮದ 23 ವರ್ಷದ ಯೂಟ್ಯೂಬರ್ ಛಾವಿ ವಶ್ವರಿಣಿ ಹಾಗೂ ಅವರ ತಾಯಿ ಸಾರಿಕಾ ಮೃತಪಟ್ಟಿದ್ದಾರೆ.
ಈ ಘಟನೆ ಮಂಗಳವಾರ ಬೆಳಗ್ಗೆ ಉಜ್ಜೈನ್-ಗರೋತ್ ನಾಲ್ಕು ಪಥದ ರಸ್ತೆಯಲ್ಲಿ ರಾಮಖೇಡಿ ಗ್ರಾಮದ ಬಳಿ ನಡೆದಿದೆ. ಛಾವಿ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಟ್ರಕ್ ನಡುವೆ ಏಕಾಏಕಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಅಥವಾ ಚಿಕಿತ್ಸೆಗೂ ಮುನ್ನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಪಘಾತದ ವೇಳೆ ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಛಾವಿ ತಮ್ಮ ತಾಯಿ ಸಾರಿಕಾ, ತಂದೆ ಶ್ಯಾಮ್‌ಲಾಲ್, ಸಂಬಂಧಿ ಸೂರಜ್‌ಪಾಲ್ ಹಾಗೂ ಚಾಲಕ ಸಚಿನ್ ಅವರೊಂದಿಗೆ ಸೋಮವಾರ ರಾತ್ರಿ ಉಜ್ಜೈನ್ ಕಡೆಗೆ ಹೊರಟಿದ್ದರು. ಆದರೆ ಮರುದಿನ ಬೆಳಗ್ಗೆ ಸಂಭವಿಸಿದ ಅಪಘಾತ ಅವರ ಪ್ರಯಾಣವನ್ನು ದುರಂತವಾಗಿ ಅಂತ್ಯಗೊಳಿಸಿದೆ.
ಈ ದುರ್ಘಟನೆಯಲ್ಲಿ ಛಾವಿ ಹಾಗೂ ಅವರ ತಾಯಿ ಸಾರಿಕಾ (50) ಮೃತಪಟ್ಟರೆ, ತಂದೆ ಶ್ಯಾಮ್‌ಲಾಲ್, ಸಂಬಂಧಿ ಸೂರಜ್‌ಪಾಲ್ ಮತ್ತು ಕಾರು ಚಾಲಕ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆರಂಭದಲ್ಲಿ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಗರದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಎನ್‌ಹೆಚ್‌ಎಐ (NHAI) ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಇನ್ನು ಛಾವಿ ವಶ್ವರಿಣಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. 2021ರಲ್ಲಿ ಆರಂಭಿಸಿದ್ದ ಅವರ ಯೂಟ್ಯೂಬ್ ಚಾನೆಲ್‌ಗೆ 7 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳಿದ್ದರು. ಡೈಲಿ ವ್ಲಾಗ್‌ಗಳು (Daily Vlogs) ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಡಿಯೋಗಳ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಯುವ ಯೂಟ್ಯೂಬರ್ ಸಾವಿನ ಸುದ್ದಿ ತಿಳಿದು ಅವರ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣದ ಫಾಲೋವರ್‌ಗಳು ಆಘಾತ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಬರೋಡ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.



