ರೇಷನ್ ಕಾರ್ಡ್ ಇದ್ದರೂ ಪಡಿತರ ಸಿಗಲ್ಲ! ಇನ್ನೂ ಈ ಜಿಲ್ಲೆಯ 1.56 ಲಕ್ಷ ಮಂದಿ ಇ-ಕೆವೈಸಿ ಬಾಕಿ
Ration Card e-KYC: ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನೂ 1,56,229 ಪಡಿತರ ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸಿಲ್ಲ. ನವೆಂಬರ್ 10ರ ಗಡುವಿನೊಳಗೆ ಪ್ರಕ್ರಿಯೆ ಮುಗಿಸದಿದ್ದರೆ ಪಡಿತರ ಸೌಲಭ್ಯ ಪಡೆಯುವಲ್ಲಿ ತೊಂದರೆ ಎದುರಾಗುವ ಸಾಧ್ಯತೆಯಿದೆ.

ಬಾಗಲಕೋಟೆ (Bagalkot): ಪಡಿತರ ಚೀಟಿದಾರರು (Ration Card Holders) ಸರ್ಕಾರದ ಆಹಾರ ಧಾನ್ಯಗಳ ಸೌಲಭ್ಯವನ್ನು ಯಾವುದೇ ಅಡಚಣೆಯಿಲ್ಲದೆ ಪಡೆಯಲು ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಈ ಕೆಲಸ ಇನ್ನೂ ಸಾವಿರಾರು ಫಲಾನುಭವಿಗಳಿಗೆ ಬಾಕಿ ಉಳಿದಿದ್ದು, ನವೆಂಬರ್ 10ರೊಳಗೆ ಪ್ರಕ್ರಿಯೆ ಮುಗಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚಿಸಿದೆ.
ಜಿಲ್ಲೆಯಲ್ಲಿ ಒಟ್ಟು 8,59,241 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿತ್ತು. ಈ ಪೈಕಿ 6,96,027 ಮಂದಿ ಈಗಾಗಲೇ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಆದರೆ, ಇನ್ನೂ 1,56,229 ಜನರ ಇ-ಕೆವೈಸಿ ಬಾಕಿ ಉಳಿದಿದೆ. ಗಡುವಿನೊಳಗೆ ಎಲ್ಲರ ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ರೈತರಿಗೆ ಕರ್ನಾಟಕ ರಾಜ್ಯೋತ್ಸವಕ್ಕೆ ಬಂಪರ್ ಗಿಫ್ಟ್! ನ.1ಕ್ಕೆ ನೇಗಿಲ ಯೋಗಿ ಯೋಜನೆ ಆರಂಭ
ಇ-ಕೆವೈಸಿ ಮಾಡಿಸುವುದು ಹೇಗೆ?
ಇನ್ನೂ ಇ-ಕೆವೈಸಿ ಮಾಡಿಸದವರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅಂಗಡಿಗೆ ತೆರಳಲು ಸಾಧ್ಯವಾಗದವರು ಸರ್ಕಾರದ ಅನ್ನಸೇವೆ ಮೊಬೈಲ್ ಆ್ಯಪ್ (Anna Seva Mobile App) ಮೂಲಕವೂ ಈ ಸೌಲಭ್ಯ ಬಳಸಿಕೊಳ್ಳಬಹುದು.
ಇ-ಕೆವೈಸಿ ಮಾಡಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದೆ. ಆದ್ದರಿಂದ ಹಣ ನೀಡುವ ಅಗತ್ಯವಿಲ್ಲ ಎಂಬುದನ್ನು ಫಲಾನುಭವಿಗಳು ಗಮನದಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ: ಕಬ್ಬು ಬೆಳೆಗಾರರ ಸಮಸ್ಯೆ ಚರ್ಚೆಗೆ ಸಭೆ; 2 ದಿನ ಸಿಎಂ ಬೆಳಗಾವಿ ಪ್ರವಾಸ! ಮಹತ್ವದ ಮಾತುಕತೆ
ನವೆಂಬರ್ 10ರ ಗಡುವು ಸಮೀಪಿಸುತ್ತಿರುವುದರಿಂದ ಬಾಕಿ ಉಳಿಸಿಕೊಂಡಿರುವವರು ಕೊನೆಯ ಕ್ಷಣದವರೆಗೆ ಕಾಯದೆ ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮ. ಇಲ್ಲವಾದರೆ ಪಡಿತರ ಸೌಲಭ್ಯ ಪಡೆಯುವಾಗ ತೊಂದರೆ ಎದುರಾಗುವ ಸಾಧ್ಯತೆ ಇರುವುದರಿಂದ, ತಮ್ಮ ಪಡಿತರ ಚೀಟಿಯ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



